‘ಸಿ’ ದರ್ಜೆ ದೇವಾಲಯಗಳ ಅರ್ಚಕರು, ‌ಸಿಬ್ಬಂದಿಯಿಂದ ಸಹಾಯ ಧನಕ್ಕೆ ‘ಶ್ರಮಿಕ’ ಕಛೇರಿಯಲ್ಲಿ ಅರ್ಜಿ ಸಲ್ಲಿಕೆ: ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಧಾರ್ಮಿಕ‌ ಪರಿಷತ್ ಸದಸ್ಯರಿಗೆ ಹಸ್ತಾಂತರ

ಬೆಳ್ತಂಗಡಿ: ತಾಲೂಕಿನ 40 ‘ಸಿ’ ದರ್ಜೆ ದೇವಾಲಯಗಳ ಸುಮಾರು ನೂರಕ್ಕೂ ಹೆಚ್ಚು‌ ಅರ್ಚಕರು ‌ಹಾಗೂ‌ ಸಿಬ್ಬಂದಿ ತಮ್ಮ ಅರ್ಜಿಗಳನ್ನು ಶುಕ್ರವಾರ ಶ್ರಮಿಕ‌ ಕಚೇರಿಯಲ್ಲಿ ಶಾಸಕ ಹರೀಶ ಪೂಂಜ ಅವರ ಸಮ್ಮುಖದಲ್ಲಿ ದ.ಕ. ಜಿಲ್ಲಾ ಧಾರ್ಮಿಕ‌ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರಿಗೆ ಸಲ್ಲಿಸಿದರು.

ಕೋವಿಡ್-19 ಸಂಕಷ್ಟದ ‌ಕಾರಣ ಧಾರ್ಮಿಕ ದತ್ತಿ ಇಲಾಖೆ ಸಮೂಹ ‘ಸಿ’ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ತಲಾ ರೂ. 3000 ರಂತೆ ಧನ ಸಹಾಯಧನವನ್ನು ಸರಕಾರ ಘೋಷಿಸಿತ್ತು. ಬೆಳ್ತಂಗಡಿ ತಾಲೂಕಿನಲ್ಲಿರುವ ಸುಮಾರು 40 ಸಿ ದರ್ಜೆ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತಾಧಿಕಾರಿ ಅವರನ್ನು ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಅವರ ವತಿಯಿಂದ ಸಂಪರ್ಕಿಸಿ, ಸೂಕ್ತ ದಾಖಲೆಗಳ ಸಹಿತ ಅರ್ಜಿಯನ್ನು ಶ್ರಮಿಕ ಕಚೇರಿ ಮೂಲಕ ಭರ್ತಿ ಮಾಡಲಾಯಿತು. ಶಾಸಕರ ಸಮ್ಮುಖದಲ್ಲಿ ಧಾರ್ಮಿಕ‌ ಪರಿಷತ್ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆ.ಧನಂಜಯ ರಾವ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ ಗೇರುಕಟ್ಟೆ ಹಾಗೂ ವಿವಿಧ ದೇವಾಲಯಗಳ ಅರ್ಚಕ, ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!