ಬೆಳ್ತಂಗಡಿ: ಕೋವಿಡ್ ಮಹಾಮಾರಿ ಸಂಕಷ್ಟದ ಸಮಯದಲ್ಲಿ ಕಷ್ಟವನ್ನು ಅರಿತುಕೊಂಡು ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಮಾಡುತ್ತಿದೆ. ಇಂದು 32 ಮಂದಿ ವಿಶೇಷ ಚೇತನರಿಗೆ ತಲಾ ರೂ. 3 ಸಾವಿರದಂತೆ ಸಹಾಯಧನ ವಿತರಣೆ ಮಾಡಿರುವುದು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯ 32 ಮಂದಿ ವಿಶೇಷ ಚೇತನರಿಗೆ ತಲಾ 3000 ರೂ.ನಂತೆ ವಾರ್ಡ್ ಸದಸ್ಯರು ಮತ್ತು ಸಿಬ್ಬಂದಿಗಳು ಮನೆಮನೆಗೆ ತೆರಳಿ ನೀಡುವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಸಹಾಯಧನ ವಿತರಿಸಿ ಮಾತನಾಡಿದರು.
ಈಗಾಗಲೇ ಪಟ್ಟಣದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ವ್ಯಾಕ್ಸಿನ್ ನೀಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿದೆ. ಯಶಸ್ವಿಯಾಗಿ ಕೊರೊನಾ ದೂರ ಮಾಡುವ ನಿಟ್ಟಿನಲ್ಲಿ ಕೊರೊನಾ ಮುಕ್ತ ಪಟ್ಟಣ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ, ಸದಸ್ಯರು, ಅಧಿಕಾರಿಗಳು ಹಾಗೂ ಟಾಸ್ಕ್ ಪೋರ್ಸ್ ಸದಸ್ಯರು ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರ ಜಿಲ್ಲೆಗೆ ಬೇಕಾಗುವ ವ್ಯಾಕ್ಸಿನ್ ಪೂರೈಕೆ ಮಾಡುತ್ತದೆ. ತಾಲೂಕಿನಲ್ಲಿ ಜೂನ್ ತಿಂಗಳ ಕೊನೆಯೊಳಗೆ ಸಂಪೂರ್ಣ ವ್ಯಾಕ್ಸಿನ್ ಕೊರತೆ ನೀಗಲಿದೆ ಎಂದು ಶಾಸಕರು ತಿಳಿಸಿದರು.
ಪಂ. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವಿಶೇಷ ಚೇತನರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊರೋನ ಸಂದರ್ಭದಲ್ಲಿ ಪಂಚಾಯಿತಿ ಆಡಳಿತ ಕೆಲಸ ಮಾಡುತ್ತಿದ್ದು, ಕೊರೋನ ಮುಕ್ತ ಪಟ್ಟಣ ಪಂಚಾಯಿತಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಸದಸ್ಯರಾದ ಜಗದೀಶ್ ಡಿ., ಶರತ್ ಕುಮಾರ್ ಶೆಟ್ಟಿ, ಲೋಕೇಶ್, ಗೌರಿ, ಅಂಬರೀಶ್, ಜನಾರ್ದನ ಎಂಜಿನಿಯರ್ ಮಹಾವೀರ ಆರಿಗ, ಸಂಘಟನಾ ಅಧಿಕಾರಿ ಮೆಟಿಲ್ಡ ಡಿಕೊಸ್ತಾ ಉಪಸ್ಥಿತರಿದ್ದರು.