ವನ್ಯ ಜೀವಿಗಳ ಬದುಕಿಗಾಗಿ ಕಾಡಿನಲ್ಲಿ ಹಣ್ಣಿನ ಗಿಡಗಳ‌ ನಾಟಿ: ಪೈಲಟ್ ಯೋಜನೆಯಾಗಿ‌ ಬೆಳ್ತಂಗಡಿ ತಾಲೂಕಿನಲ್ಲಿ 125 ಎಕರೆ ಪ್ರದೇಶ ಗುರುತು: ಧರ್ಮಸ್ಥಳದಲ್ಲಿ 12 ಎಕರೆ ಪ್ರದೇಶದಲ್ಲಿ ಹಣ್ಣಿನ ಗಿಡ ನಾಟಿ‌ ಮಾಡಿ‌ ಚಾಲನೆ: ಅರಣ್ಯ ಸಚಿವ ಅರವಿಂದ ಲಿಂಬಾವಳಿ: ಗಿಡನೆಟ್ಟು ಉಳಿಸಿ, ಬೆಳೆಸಿ, ರಕ್ಷಿಸುವ ಕೆಲಸ ಮಾಡಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಿರಂತರ ಸಾಗಿದೆ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯ: ಡಾ. ಹೆಗ್ಗಡೆ: ಮರಗಳಿಗೆ ರಕ್ಷೆ ಕಟ್ಟುವ ಮೂಲಕ ವೃಕ್ಷಾ ಬಂಧನ: ಡಬಲ್ ಡೆಕ್ಕರ್ ಗ್ರೀನ್ ಬಸ್‌ ಉದ್ಘಾಟನೆ: ವಿಪತ್ತು ನಿರ್ವಹಣಾ ಘಟಕದ ಶೌರ್ಯ ಸ್ವಯಂ- ಸೇವಕರಿಗೆ ಗಿಡಗಳ ವಿತರಣೆ

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ 125 ಎಕರೆ ಪ್ರದೇಶ ಗುರುತಿಸಿ, ವನ್ಯ ಜೀವಿಗಳ‌ ಹಸಿವು ನೀಗಿಸಲು ಹಣ್ಣಿನ ‌ಗಿಡ ನೆಡಲಾಗುತ್ತಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಈ ಯೋಜನೆ ಅಂಗವಾಗಿ ವಿಶ್ವ ಪರಿಸರ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹನ್ನೆರಡೂವರೆ ಎಕರೆ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಅರಣ್ಯ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಡಿನಲ್ಲಿ ವನ್ಯ ಪ್ರಾಣಿಗಳಿಗಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವನ್ಯಪ್ರಾಣಿಗಳ ಆಹಾರದ ಕೊರತೆಯನ್ನು ನೀಗಿಸಲು ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕುರಿತು ರಾಜ್ಯ ಸರಕಾರ ಮಹತ್ವದ ಯೋಜನೆ ಹಮ್ಮಿಕೊಂಡಿದೆ. ಈ ಯೋಜನೆಗೆ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಪೈಲೆಟ್ ಕಾರ್ಯಕ್ರಮವಾಗಿ ಮಾಡಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ದೂರವಾಣಿ ಕರೆ ಮಾಡಿ ಕಾಡಿನಲ್ಲಿರು ವನ್ಯ ಜೀವಿಗಳ ಬದುಕಿಗಾಗಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕುರಿತು ಸಮಾಲೋಚನೆ ನಡೆಸಿದ್ದರು. ಅದರಂತೆ ಎ.31 ರಂದು ಧರ್ಮಸ್ಥಳ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಯಲ್ಲಿ ಸಭೆಯನ್ನು ನಡೆಸಿ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. ಡಾ. ಹೆಗ್ಗಡೆಯವರ ಆಶಯದಂತೆ ಅವರಿಗಿರುವ ಪ್ರಾಣಿ ಪ್ರಿಯತೆಯಿಂದಾಗಿ ಹಾಗು ಅವರ ಸಹಕಾರದಿಂದಾಗಿ ಶೀಘ್ರ ಆರಂಭಿಸಲಾಗಿದೆ ಎಂದರು.

ಕೊರೋನ ಸಂಕಷ್ಟವಿದ್ದರೂ, ಮುಂಗಾರು ಆರಂಭದ ಸಮಯವಾಗಿದ್ದು ನಾಟಿ ಮಾಡುವ ಸಮಯ ಇದಾಗಿದ್ದು, ಇದೀಗ 12 ಎಕರೆ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಅರ್ಧ ಎಕರೆ ಜಾಗದಲ್ಲಿ ಮಿಯಾವಾಕಿ ಮಾದರಿಯ ಕೃಷಿಯನ್ನು ಕೈಗೊಳ್ಳಲಾಗುತ್ತಿದೆ. ಕೊರೋನ ಮಹಾಮಾರಿಯಿಂದಾಗಿ ದೇಶ-ವಿದೇಶದಿಂದ ಆಕ್ಸಿಜನ್ ತರಿಸುವಂತಹ ಪರಿಸ್ಥಿತಿ ಬಂದಿದೆ. ಆಮ್ಲಜನಕಕ್ಕಾಗಿ ಗಿಡ-ಮರಗಳ ಉಪಯುಕ್ತತೆ ಹೆಚ್ಚಾಗಿದೆ. ಹೀಗಾಗಿ ಜನತೆ ಗಿಡಗಳನ್ನು ನೆಡುವತ್ತ ಗಮನಹರಿಸಬೇಕು ಎಂದರು.

 

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಅರಣ್ಯ ಸಚಿವರು ಕೆಲವೇ ದಿನಗಳಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಆಲೋಚನೆಗಳಿಗೆ ಸ್ಪಂದಿಸಿ, ತಕ್ಷಣ ಆಸಕ್ತಿ ವಹಿಸಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಈ ಹಿಂದೆ ಅರಣ್ಯವನ್ನು ಉಳಿಸಲು ಪ್ರಯತ್ನಿಸುತ್ತಿದ್ದೆವು. ಇಂದಿನ ದಿನದಲ್ಲಿ ಉಳಿಸಿ, ಬೆಳೆಸಿ, ರಕ್ಷಿಸುವ ಕೆಲಸ ಮಾಡಬೇಕಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸಿ ಈ ಯೋಜನೆಯನ್ನು ಹಾಕಿಕೊಂಡಿರುವುದು ಶ್ಲಾಘನೀಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಾವು ಈಗಾಗಲೇ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದೇವೆ. ಅದು ನಿರಂತರವಾಗಿ ನಡೆಯುತ್ತಿದೆ. ಇದೀಗ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅದನ್ನು ವಿಸ್ತರಿಸಲಿದ್ದೇವೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣ ಘಟಕದ ಶೌರ್ಯ ತಂಡದ ಸದಸ್ಯರು ಗಿಡಗಳನ್ನು ನೆಡುವ ಕಾರ್ಯ ಮಾಡಲಿದ್ದಾರೆ. ಈ ವಿಶೇಷ ಕಾರ್ಯಕ್ರಮ ಇಂದಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಕೃತಿ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಮರಗಳಿಗೆ ರಕ್ಷೆ ಕಟ್ಟುವ ಮೂಲಕ ವೃಕ್ಷಾ ಬಂಧನ ನಡೆಸಲಾಯಿತು. ಇಲಾಖಾ ಸಿಬ್ಬಂದಿಗಳು ಗಿಡ ನೆಡುವ ಪ್ರಾತ್ಯಕ್ಷಿಕೆ ಮಾಡಿದರು. ಕ್ಷೇತ್ರದ ಗಂಗೋತ್ರಿ ವಸತಿ ಗೃಹದ ಬಳಿ ಕ್ಷೇತ್ರದ ವತಿಯಿಂದ ಸಿದ್ಧಪಡಿಸಲಾದ ಡಬಲ್ ಡೆಕ್ಕರ್ ಗ್ರೀನ್ ಬಸ್‌ನ್ನು ಸಚಿವರು ಉದ್ಘಾಟಿಸಿದರು. ಸಚಿವ ಅರವಿಂದ ಲಿಂಬಾವಳಿ, ಡಾ. ಹೆಗ್ಗಡೆಯವರು ಮತ್ತು ಗಣ್ಯರು ವಿಪತ್ತು ನಿರ್ವಹಣಾ ಘಟಕದ ಶೌರ್ಯ ಸ್ವಯಂ- ಸೇವಕರಿಗೆ ಗಿಡಗಳನ್ನು ವಿತರಿಸಿದರು.

ಶಾಸಕ ಹರೀಶ ಪೂಂಜ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಮೋಹನ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಮಂಗಳೂರು ವಿಭಾಗ ಉಪ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಧರ್ಮಸ್ಥಳ ಗ್ರಾ. ಪಂ.ಅಧ್ಯಕ್ಷ ಜಯಾ ಮೋನಪ್ಪ ಗೌಡ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ ಹೆಚ್. ರಬ್ಬರ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲ, ಎಸ್.ಕೆ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮೊದಲಾದವರು ಇದ್ದರು.

error: Content is protected !!