ದಾದಿಯರು ಆಸ್ಪತ್ರೆಗಳ ಹೃದಯವಿದ್ದಂತೆ: ಎಸ್.ಡಿ.ಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ರಂಜನ್ ಕುಮಾರ್ ಅಭಿಮತ:  ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

 

ಬೆಳ್ತಂಗಡಿ: ವೈದ್ಯರು ಆಸ್ಪತ್ರೆಯ ಮೆದುಳಿದ್ದಂತೆ, ದಾದಿಯರು ಹೃದಯವಿದ್ದಂತೆ ಎಂದು ಎಸ್.ಡಿ.ಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ರಂಜನ್ ಕುಮಾರ್ ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯ ದಾದಿಯರನ್ನು ಶುಭಾಶಯ ಕೋರಿ ಮಾತನಾಡಿದರು.

ವೈದ್ಯ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರೆ, ದಾದಿಯರು ಪ್ರತಿಕ್ಷಣ ರೋಗಿಯ ಆರೈಕೆಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವುದರಿಂದ ರೋಗಿಯ ಆರೋಗ್ಯ ಚೇತರಿಕೆಯಲ್ಲಿ ದಾದಿಯರ ಸೇವೆ ಬಲು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದರು.

ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಮಾತನಾಡಿ ರೋಗಿಗಳ ಪಾಲಿಗೆ ದಾದಿಯರು ತಾಯಿ ಇದ್ದಂತೆ. ದಾದಿಯರಲ್ಲಿ ಮಾತೃಪ್ರೇಮವಿದ್ದಾಗ ಮಾತ್ರ ತನ್ನ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಕೊರೊನಾದಂತ ಗಂಭಿರ ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಹರಡಿರುವ ಸಂದರ್ಭದಲ್ಲಿಯೂ ರೋಗಿಗಳ ಸೇವೆಯನ್ನು ನಿರ್ಭೀತಿಯಿಂದ ನಿಭಾಯಿಸುತ್ತಿರುವ ಎಲ್ಲಾ ದಾದಿಯರು ಆರೋಗ್ಯವಂತರಾಗಿರಲಿ ಎಂದು ಹಾರೈಸಿದರು.

ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಹಿರಿಯ ವೈದ್ಯರಾದ ಡಾ.ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತಾ. ಪಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯ ವೃಂದದವರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!