ಜನರಲ್ಲಿ ಧೈರ್ಯ ತುಂಬುವ ಕೆಲಸ ಪಂಚಾಯತ್ ಸದಸ್ಯರು ಮಾಡಬೇಕು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕೊರೊನಾ ಸೋಂಕು ದಿನದಿಂದ ದಿನ ಹೆಚ್ಚಾಗುತ್ತಲಿದ್ದು ಪಂಚಾಯತ್ ಸದಸ್ಯರುಗಳು ಈ ಬಗ್ಗೆ ಜನರಲ್ಲಿ ಎಚ್ಚರ ವಹಿಸುವಂತೆ ಸೂಚಿಸುವುದಲ್ಲದೆ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಲಾಯಿಲ ಗ್ರಾಮ ಪಂಚಾಯತ್ ಕೋವಿಡ್ -19 ಕಾರ್ಯಪಡೆ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜನರು ಈಗಾಗಲೇ ಕೊರೊನಾ ಬಗ್ಗೆ ಅತಂಕ ಪಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ವಾರ್ಡ್ ಗಳ ಎಲ್ಲ ಜನರೊಂದಿಗೆ ಬೆರೆತು ಕೊರೊನಾ ಜಾಗೃತಿ ಬಗ್ಗೆ ಅರಿವು ಮೂಡಿಸುವುದಲ್ಲದೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಮನೋಸ್ಥೈರ್ಯವನ್ನು ಹೆಚ್ಚಿಸಬೇಕು.

ತಮ್ಮ ವಾರ್ಡ್ ಗಳಲ್ಲಿ ಏನಾದರೂ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಅವರನ್ನು ತಪಾಸಣೆಗೆ ಒಳಪಡಿಸಲು ಸೂಚಿಸಬೇಕು. ಅದಲ್ಲದೆ ಕೊರೊನಾ ಪಾಸಿಟಿವ್ ಸೋಂಕು ಕಂಡುಬಂದ್ದಲ್ಲಿ ಆರೋಗ್ಯ ಕಾರ್ಯಕರ್ತರ ಜೊತೆ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಂಡು ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಈ ಬಗ್ಗೆ ಸರಿಯಾದ ಮಾಹಿತಿಗಳನ್ನು ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸುವಂತಹ ಕಾರ್ಯ ಮಾಡಬೇಕು. ಎಲ್ಲೂ ಹೊರಗೆ ಹೋಗದಂತೆ ಅವರಿಗೆ ತಿಳಿಸಿ ಅವರ ತುರ್ತು ಅವಶ್ಯಕತೆಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡಬೇಕು. ಅದಲ್ಲದೆ ಆರೋಗ್ಯ ಸಹಾಯಕಿಯರಲ್ಲಿ ದಿನಂಪ್ರತಿ ತಮ್ಮ ವಾರ್ಡಿನ ಬಗ್ಗೆ ವಿವರಗಳನ್ನು ಪಡೆದುಕೊಳ್ಳಬೇಕು. ಪ್ರತೀ ದಿನ ಅವರಿಗೆ ಪೋನ್ ಮಾಡಿ ಅವರ ಆರೋಗ್ಯ ವಿಚಾರಿಸಿ ಈ ಬಗ್ಗೆ ನಿಗಾ ವಹಿಸಬೇಕು. ಮಾಸ್ಕ್ , ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಸೂಚಿಸಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಅದಷ್ಟೂ ಜನ ಸೇರದಂತೆ ಮನವೊಲಿಸಿ ಕೊರೊನಾ ಮಾರ್ಗಸೂಚಿಯಲ್ಲಿ ಸರಿಯಾಗಿ ಪಾಲಿಸುವಂತೆ ತಿಳಿಸಬೇಕು.

ಪಂಚಾಯತ್ ವತಿಯಿಂದ ಜಾಗೃತಿ ಸಂದೇಶಗಳನ್ನು ಧ್ವನಿ ವರ್ಧಕದ ಮೂಲಕ ಈ ಬಗ್ಗೆ ಮಾಹಿತಿಗಳನ್ನು ನೀಡಬೇಕುು. ಯಾರನ್ನೂ ಅನವಶ್ಯಕವಾಗಿ ತಿರುಗಾಡದಂತೆ ನೋಡಿಕೊಳ್ಳುವುದಲ್ಲದೆ ಎಲ್ಲರೂ ಮನೆಯಲ್ಲಿ ಇರುವಂತೆ ಪ್ರೇರೆಪಿಸಬೇಕು. ಸ್ಥಳೀಯವಾಗಿ ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ಅವರ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಬೇಕು. ಇತರ ಜಿಲ್ಲೆಗಳಿಂದ ಊರಿಗೆ ಆಗಮಿಸುವವರ ಬಗ್ಗೆ ಗಮನ ಹರಿಸಿ ಅವರನ್ನು ಒಂದು ವಾರ ಕಾಲ ಹತ್ತಿರದ ಶಾಲೆಯಲ್ಲಿ ಸೆಲ್ಫ್ ಕ್ವಾರಂಟೈನ್ ಆಗುವಂತೆ ಮನವೊಲಿಸುವಂತಹ ಕೆಲಸ ಮಾಡಬೇಕು. ಈ ರೀತಿಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವಂತಹ ಕೆಲಸ ಗ್ರಾಮ ಮಟ್ಟದಿಂದ ಆಗಬೇಕು. ಎಲ್ಲರೂ ಸೇರಿ ತಾಲೂಕನ್ನು ಕೊರೊನಾ ಮುಕ್ತವಾಗಿನ್ನಾಗಿಸುವಲ್ಲಿ ಪ್ರಯತ್ನಿಸಬೇಕು ಎಂದರು. ನಂತರ ಅಧಿಕಾರಿಗಳಿಂದ  ಗ್ರಾಮದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ ಹಾಗೂ  ಆರೋಗ್ಯ ಸಹಾಯಕಿಯರಿಂದ ಕೋವಿಡ್ ವಿವರಗಳನ್ನು ಪಡೆದುಕೊಂಡ ಶಾಸಕರು ಕೊರೊನಾ ಕಾರ್ಯಪಡೆ ಸಮಿತಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚನೆಗಳನ್ನು ನೀಡಿದರು.

ಕೊರೊನಾ ನಿಯಮದಂತೆ ನಡೆದ ಸಭೆಯ ಅಧ್ಯಕ್ಷತೆಯನ್ನು ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಣೇಶ್ ವಹಿಸಿಕೊಂಡಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮೋದರ್, ಗ್ರಾ.ಪಂ ಸದಸ್ಯರುಗಳು, ಕೋವಿಡ್ ಕಾರ್ಯಪಡೆಯ ಸದಸ್ಯರುಗಳು ಪಂಚಾಯತ್ ಕಾರ್ಯದರ್ಶಿ ಪುಟ್ಟ ಸ್ವಾಮಿ, ಲೆಕ್ಕ ಸಹಾಯಕಿ ರೇಶ್ಮಾ ಮ ಗಂಜಿ ಗಟ್ಟಿ ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!