ಬೆಳ್ತಂಗಡಿ: ರಾಜ್ಯಾದ್ಯಂತ ಲಸಿಕೆ ಕೊರತೆ ಇದ್ದರೂ ಸ್ಪಷ್ಟ ಮಾಹಿತಿ ಇಲ್ಲದೆ, ಗೊಂದಲದ ನಡುವೆಯೂ ಮೊದಲನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದ ಹಿರಿಯರು ಎರಡನೇ ಡೋಸ್ ಕುರಿತು ಸ್ಪಷ್ಟ ಮಾಹಿತಿಯ ಕೊರತೆಯಿಂದಾಗಿ ಸಾರ್ವಜನಿಕ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಜನಸಂದಣಿ ಉಂಟಾಯಿತು.
ಮಾರ್ಚ್ ತಿಂಗಳಿನಿಂದ ಲಸಿಕೆ ಹಾಕಿಸಿಕೊಳ್ಳಲು ವೈದ್ಯರಾದಿಯಾಗಿ ಸರಕಾರ ಜನತೆಯನ್ನು ಮನವಿ ಮಾಡಿಕೊಂಡಿದ್ದರು. ಆದರೆ ಕೊರೊನಾ ಎರಡನೇ ಅಲೆ ಶುರುವಾದ ಬಳಿಕ ಸಾರ್ವಜನಿಕರು ಎಚ್ಚೆತ್ತುಕೊಂಡು ಲಸಿಕೆ ಹಾಕಿಸಿಕೊಂಡಿದ್ದರು. ಮೊದಲನೆ ಹಂತದ ಲಸಿಕೆ ಹಾಕಿಸಿಕೊಳ್ಳುವವರಿಗೆ ಇನ್ನೂ ಕೆಲ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದರ ನಡುವೆ ಸರಕಾರದಿಂದ ತಾಲೂಕು ಆಸ್ಪತ್ರೆಗೆ ಕುಳುಹಿಸಿಕೊಟ್ಟ ಲಸಿಕೆಯನ್ನು ಆದ್ಯತೆ ಮೇರೆಗೆ ಮೊದಲನೇ ಡೋಸ್ ಪಡೆದ ಕ್ರಮವಾಗಿ ಎರಡನೇ ಡೋಸ್ ಕೊಡಲಾಗುತ್ತಿದೆ.
ಕ್ರಮಪ್ರಕಾರವಾಗಿ ಮೊದಲ ಡೋಸ್ ಪಡೆದ ಮೊದಲಿಗರಿಗೆ ಸೋಮವಾರ ಬರುವಂತೆ ಕೋವಿಡ್ ಲಸಿಕಾ ಕೇಂದ್ರದಿಂದ ಮಾಹಿತಿ ನೀಡಿದ್ದರು. ಆದರೆ ಎರಡನೇ ಹಂತದ ಲಸಿಕೆ ಬಂದಿದೆ ಎಂಬ ಮಾಹಿತಿ ಹಬ್ಬುತ್ತಿದ್ದಂತೆ ಮೊದಲನೇ ಡೋಸ್ ಹಿರಿಯರು ತಮ್ಮ ಮನೆಯವರೊಂದಿಗೆ ಆಸ್ಪತ್ರೆಗೆ ಬಂದಿದ್ದು ಇದರಿಂದ ಕೆಲ ಹೊತ್ತು ಹೆಸರು ನೋಂದಾಯಿಸಿಕೊಳ್ಳಲು ಸಂದಣಿ ಹೆಚ್ಚಾಯಿತು. ಸಾಮಾಜಿಕ ಅಂತರ ಕಾಯ್ದು ಕೊಳ್ಳವಂತೆ ಆಸ್ಪತ್ರೆಯ ಸಿಬ್ಬಂದಿಗಳ ಮನವಿಯನ್ನು ಕೇಳಿಸಿಕೊಳ್ಳುವಂತಿರಲಿಲ್ಲ. ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಕಷ್ಟ ಪಡಬೇಕಾಯಿತು.
ಕರೋನಾ ಸೋಂಕಿತರ ಚಿಕಿತ್ಸೆ ಹಾಗು ಇನ್ನಿತರ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೊರತೆ ಇದ್ದರೂ ಈಗಿರುವ ವೈದ್ಯರುಗಳು, ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿ- ದರ್ಜೆ ನೌಕರರ ಕೊರತೆ ಇದ್ದು ಇವರ ಕೆಲಸವನ್ನು ಸ್ಟಾಫ್ ನರ್ಸ್‌ಗಳು ಮಾಡಬೇಕಾದ ಅನಿವಾರ್ಯ ಎದುರಾಗಿದೆ.
ಮೊದಲ ಮಹಡಿಯಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿಯೇ ಲಸಿಕೆ ಹಾಕಿಸಿ ಕೊಳ್ಳುವವರ ನೋಂದಣಿ ಮಾಡಲಾಗುತ್ತಿದೆ. ದಾಖಲೀಕರಣ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದರಿಂದ ಲಸಿಕೆ ನೀಡುವ ಸ್ಥಳದಲ್ಲಿ ಸಂದಣಿ ಉಂಟಾಗುತ್ತಿದೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳು ಸೇರಿಂದ ಲಸಿಕೆ ಹಾಕಿಸಿಕೊಳ್ಳವವರು ಪರದಾಡುವಂತಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಲು ಹಿರಿಯರೊಂದಿಗೆ ಆಸ್ಪತ್ರೆಗೆ ಮನೆಮಂದಿಯೊಂದಿಗೆ ಬರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದರೆ ಬಂದವರಲ್ಲಿ ಸೋಂಕು ಇದ್ದರೆ ಹಂಚಿಕೆ ಕಾರ್ಯ ಆಗಬಹುದು. ಮೊದಲನೇ ಡೋಸ್ ಪಡೆದವರು ಲಸಿಕೆ ಹಾಕಿಸಿಕೊಳ್ಳಲು ಬರುವ ಮುಂಚಿತವಾಗಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಂಡಲ್ಲಿ ಗೊಂದಲಕ್ಕೂ ತೆರೆ ಬಿದ್ದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
100 ಡೋಸ್ ಲಸಿಕೆ!:
ತಾಲೂಕಿಗೆ 100 ಡೋಸ್ ಲಸಿಕೆ ಬಂದಿದ್ದು ಇದರಲ್ಲಿ 50 ಡೋಸ್ ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ನೀಡುತ್ತಿದ್ದು, ಉಳಿದ 50 ಡೋಸ್ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಆದ್ಯತೆ ಮೇರೆಗೆ ಕ್ರಮಪ್ರಕಾರ ಲಸಿಕೆ ನೀಡಲಾಗುತ್ತಿದೆ. ಕರೆ ಮಾಡಿ ಮಾಹಿತಿ ನೀಡಲಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ.