ಧರ್ಮಸ್ಥಳದ ಆಶ್ರಯದಲ್ಲಿ 49ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಾಳೆ: 132 ಜೋಡಿ ದಾಂಪತ್ಯ ಜೀವನಕ್ಕೆ

ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ 49ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಾಳೆ ಗುರುವಾರ ಶುಭ ಮುಹೂರ್ತದಲ್ಲಿ ನಡೆಯುತ್ತದೆ.

ಕೊರೊನಾ ಬಗ್ಯೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸರ್ಕಾರದ ಮಾರ್ಗಸೂಚಿ ನಿಯಮಗಳಂತೆ ಅತ್ಯಂತ ಸರಳ ರೀತಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧೂ-ವರರ ಊರಿನ ದೇವಸ್ಥಾನದಲ್ಲಿ ಮದುವೆಯನ್ನು ನಡೆಸಲಾಗುವುದು. ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆಕಣ, ಮಂಗಳಸೂತ್ರವನ್ನು ಹಾಗೂ ಉಡುಗೊರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮೂಲಕ ಸಂಬಂಧಪಟ್ಟವರಿಗೆ ಈಗಾಗಲೆ ತಲುಪಿಸಲಾಗಿದೆ.

ವರದಕ್ಷಿಣೆ ಹಾಗೂ ಮದುವೆಗೆ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷ ನಡೆಸುತ್ತಿದ್ದು, ಈ ತನಕ ಒಟ್ಟು 12,262 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಸರ್ಕಾರದ ನಿಯಮದಂತೆ ವಿವಾಹವನ್ನು ನೋಂದಾವಣೆ ಮಾಡಿ ನೋಂದಾವಣೆ ಪ್ರಮಾಣ ಪತ್ರದ ಪ್ರತಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವೀ. ಹೆಗ್ಗಡೆಯವರು ನೂತನ ದಂಪತಿಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಕೋರಿ ಶುಭ ಹಾರೈಕೆಗಳೊಂದಿಗೆ ಆಶೀರ್ವದಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಈ ವ್ಯವಸ್ಥೆಗಳನ್ನು ಆಯೋಜಿಸಿ ಯೋಜನೆಯ ಕಾರ್ಯಕರ್ತರು ಮದುವೆಯಲ್ಲಿ ಉಪಸ್ಥಿತರಿದ್ದು ಸಹಕರಿಸುವರು ಎಂದು ಧರ್ಮಸ್ಥಳದ ಧರ್ಮಾಧಿಕಾರಿಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!