ನಿಗದಿಯಾದ ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಶರ್ತಬದ್ಧ ಅನುಮತಿ: ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕ ವೀಕೆಂಡ್ ಕರ್ಪ್ಯೂ: ಇಂದಿನಿಂದಲೇ ಹೊಸ ನಿಯಮ ಜಾರಿ

ಬೆಳ್ತಂಗಡಿ: ಮಹಾಮಾರಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎ.21 ರಾತ್ರಿ 9 ರಿಂದ ಮೇ4 ಬೆಳಗ್ಗೆ 6ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಎ.21 ರಿಂದ ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ.

ಈ ಹಿನ್ನೆಲೆ ದ.ಕ ಜಿಲ್ಲೆಯಲ್ಲೂ ವೀಕೆಂಡ್ ಕರ್ಫ್ಯೂ ಹಾಗೂ ಕಠಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಕರ್ಫ್ಯೂ ಸಮಯದಲ್ಲಿ ನಿಗದಿಯಾಗಿರುವ ಮದುವೆಗೆ 50 ಜನರಿಗೆ ಮಾತ್ರ ಅವಕಾಶವಿದ್ದು, ಮದುವೆಯಲ್ಲಿ ಭಾಗಿಯಾಗುವವರ ಪಟ್ಟಿ ತಯಾರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೇಳಿದರು.

ಹೊಸ ನಿಯಮ ಜಾರಿ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪಟ್ಟಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಿ ಅನುಮತಿ ಪಡೆಯಬೇಕು. ಅಲ್ಲದೆ ಮದುವೆಗೆ ಆಗಮಿಸುವವರು ಅನುಮತಿ ಪತ್ರ, ಯಾವುದಾದರೂ ಐಡಿ ಕಾರ್ಡ್ ಹಾಗೂ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಡ್ಡಾಯವಾಗಿ ತಮ್ಮೊಂದಿಗೆ ಇರಿಸಬೇಕು.

ಈ ಮೂರು ದಾಖಲೆಗಳನ್ನು ಪೊಲೀಸರಿಗೆ ತೋರಿಸಿ ಸಂಚಾರ ಮಾಡಬಹುದು ಸ್ಥಳೀಯ ಗ್ರಾಮ ಪಂಚಾಯತ್ ನಗರ ಪಂಚಾಯತ್ ಹಾಗೂ ಇತರ ಆಡಳಿತದಿಂದ ಅನುಮತಿ ಪಡೆದ ಪತ್ರವು ವಾಟ್ಸ್​ಆ್ಯಪ್​​ನಲ್ಲಿ ಇದ್ದರೂ ಆಗುತ್ತದೆ. ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಐಡಿ ದಾಖಲೆ ಕಡ್ಡಾಯವಾಗಿ ಕೈಯಲ್ಲಿ ಇರಬೇಕು.

ಒಂದು ಪಾಸ್​ನೊಂದಿಗೆ ಅನಗತ್ಯವಾಗಿ ಇನ್ನಿತರರು ಬರುವಂತಿಲ್ಲ.‌ ಯಾರಲ್ಲಿ ಪಾಸ್, ಐಡಿ ಪ್ರತಿಗಳಿವೆಯೋ ಅವರಿಗೆ ಮಾತ್ರ ಸಂಚರಿಸಲು ಅವಕಾಶ ಇದೆ. ಮದುವೆಗೆ ಆಗಮಿಸುವ ಪುರೋಹಿತರು, ಫೋಟೋಗ್ರಾಫರ್ ಗಳು ಇದೇ 50 ಮಂದಿಯೊಳಗೆ ಬರುತ್ತಾರೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಇದೆ. ಆದರೆ ಅವರ ಪರಿಸರದ ವ್ಯಾಪ್ತಿಯಲ್ಲಿ ಮಾತ್ರ ಖರೀದಿಸಲು ಅವಕಾಶಗಳಿದ್ದು, ಬೇರೆಡೆಗೆ ಹೋಗಿ ಅನಗತ್ಯ ಓಡಾಟ ನಡೆಸುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

ದೇವಸ್ಥಾನಗಳಲ್ಲಿ ಪುರೋಹಿತರು, ದೇವಸ್ಥಾನದ ಸಿಬ್ಬಂದಿ ಸೇರಿಕೊಂಡು ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೆ ಸಾರ್ವಜನಿಕರು‌ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

error: Content is protected !!