ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎ.21 ರಾತ್ರಿ 9ರಿಂದ ಮೇ4 ಬೆಳಗ್ಗೆ 6ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಎ.21ರಿಂದ ಪ್ರತಿ ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಶಾಲೆ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸ್ವಿಮ್ಮಿಂಗ್ ಪೂಲ್, ಸಿನಿಮಾ ಹಾಲ್, ಶಾಪಿಂಗ್ ಮಾಲ್, ಯೋಗ ಕೇಂದ್ರ, ಜಿಮ್, ಕ್ರೀಡಾ ಸಂಕೀರ್ಣ, ಪಾರ್ಕ್, ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗುವುದು. ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ. ನಿರ್ಮಾಣ ಹಂತದ ಚಟುವಟಿಕೆಗಳಿಗೆ ಅವಕಾಶ. ಸೆಲೂನ್, ರೇಶನ್ ಅಂಗಡಿ, ಆಹಾರ, ತರಕಾರಿ, ದಿನಸಿ ಅಂಗಡಿ, ಬ್ಯಾಂಕ್, ಎಟಿಎಮ್, ಇನ್ಸೂರೆನ್ಸ್ ಕಚೇರಿ, ಇ-ಕಾಮರ್ಸ್, ಪೆಟ್ರೋಲ್ ಬಂಕ್ ಗಳು ತೆರೆಯಲು ಅವಕಾಶವಿದೆ.
ಸಾಧ್ಯವಾದಷ್ಟು ಕನಿಷ್ಠ ಸಿಬ್ಬಂದಿಗಳಿಗೆ ಅವಕಾಶ ನೀಡಿ ಎಲ್ಲಾ ಖಾಸಗಿ ಕಚೇರಿಗಳು, ಕಂಪೆನಿಗಳು, ಸಂಘಟನೆಗಳು ಕಾರ್ಯಾಚರಿಸಬಹುದು. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಅವಕಾಶ ನೀಡಲಾಗಿದೆ.