ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕ, ಡಾ. ಬಾಬು ಜಗಜೀವನರಾಮ್: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಡಾ. ಬಾಬು ಜಗಜೀವನರಾಮ್ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಮ್ ರವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.‌

ಜವಾಹರಲಾಲ್ ನೆಹರುರವರ ಕ್ಯಾಬಿನೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಕಾರ್ಮಿಕ ಸಚಿವರಾಗಿ, ಕೃಷಿ ಸಚಿವ ಸೇವೆ ಸಲ್ಲಿಸಿ, ಹಸಿರು ಕ್ರಾಂತಿಯನ್ನು ನಡೆಸಿ,ಸಾರ್ಥಕ ಕೃಷಿ ಸಚಿವರು ಎನಿಸಿಕೊಂಡವರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ.‌ಅಧ್ಯಕ್ಷೆ ದಿವ್ಯಜ್ಯೋತಿ ಅವರು, ಏಪ್ರಿಲ್ ಮಾಹೆಯಲ್ಲಿ ಜನಿಸಿದ ಇಬ್ಬರು ಮಹಾನ್ ನಾಯಕರಾದ ಡಾ:ಬಾಬು ಜಗಜೀವನರಾಮ್ ಹಾಗೂ ಡಾ:ಬಿ.ಆರ್.ಅಂಬೇಡ್ಕರ್ ರವರು ಸಮಾನತೆ ಹಾಗೂ ಶಿಕ್ಷಣಕ್ಕಾಗಿ ಹೋರಾಡಿ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು.

ಮುಖ್ಯ ಭಾಷಣ ಮಾಡಿದ ನಡ ಪ.ಪೂ.ಕಾಲೇಜಿನ ಉಪನ್ಯಾಸಕಿ ವಸಂತಿ ಕುಳಮರ್ವ ಇವರು ಮಾತನಾಡಿ ಡಾ.ಬಾಬು ಜಗಜೀವನರಾಂ ರವರು ಬಾಲ್ಯದ ದಿನಗಳಲ್ಲಿಯೇ ಅಸಮಾನತೆಯ ನೋವನ್ನುಂಡವರು.ಇಡೀ ಸಮುದಾಯದವರೂ ಕೂಡಾ ಈ ನೋವನ್ನು ಅನುಭವಿಸುತ್ತಿರುವುದನ್ನು ಮನಗಂಡು, ಅಸಮಾನತೆಯ ವಿರುದ್ಧ ಹೋರಾಡಿ, ಅದರಲ್ಲಿ ಯಶಸ್ವಿಯಾದರು. ಬಾಲ್ಯದಲ್ಲಿಯೇ ನಾಯಕತ್ವದ ಗುಣವನ್ನು ಹೊಂದಿದ್ದರು.ನಂತರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕಾರ್ಮಿಕ ಸಚಿವರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿದರು.ಕೃಷಿ ಸಚಿವರಾಗಿದ್ದಾಗ ಹಸಿರು ಕ್ರಾಂತಿಯನ್ನು ನಡೆಸಿ,ಹಸಿರು ಕ್ರಾಂತಿಯ ಹರಿಕಾರರಾಗಿ, ಜನರ ಪ್ರೀತಿಗೆ ಪಾತ್ರರಾಗಿ ಬಾಬೂಜಿ ಎನಿಸಿಕೊಂಡರು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಹಸೀಲ್ದಾರ್ ಮಹೇಶ್ ಜೆ., ತಾ.ಪಂ. ಇಒ ಕುಸುಮಾಧರ್, ಪ.ಪಂ.‌ ಮುಖ್ಯಾಧಿಕಾರಿ ಎಂ.ಹೆಚ್.ಸುಧಾಕರ್‌ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ‌ ಸಹಾಯಕ ನಿರ್ದೇಶಕ ಹೇಮಚಂದ್ರ ಸ್ವಾಗತಿಸಿದರು.‌ ಪ್ರಭಾರ ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿ ಹೇಮಲತಾ ಎಂ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

error: Content is protected !!