ಸತ್ಯ, ಧರ್ಮ, ನ್ಯಾಯದ ಗಡಿ ಮೀರಿ ನಿಂತ ವೀರ ಪುರುಷರು, ಕೋಟಿ ಚೆನ್ನಯ್ಯರು: ಹರಿಕೃಷ್ಣ ಬಂಟ್ವಾಳ

8

ಬೆಳ್ತಂಗಡಿ : ಸತ್ಯ, ಧರ್ಮ, ನ್ಯಾಯದ ಗಡಿ ಮೀರಿ ನಿಂತ ವೀರ ಪುರುಷರು ಕೋಟಿ-ಚೆನ್ನಯ್ಯರು ಅವರ ಕುರಿತು ಅಧ್ಯಯನ, ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವನ್ನು ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಮಾಡುತ್ತಿದೆ ಎಂದು ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಶ್ರೀನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಎಪ್ರಿಲ್ 22 ರಿಂದ 24ರ ವರೆಗೆ ಪಡುಮಲೆಯಲ್ಲಿ ನಡೆಯುವ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಮಾತನಾಡಿದರು.

ಪಡುಮಲೆಯಲ್ಲಿ ನಡೆಯುವ ಕಾರ್ಯಕ್ರಮ ಚರಿತ್ರಾರ್ಹ, ಇತಿಹಾಸ ಪುಟದಲ್ಲಿ ದಾಖಲಿಸುವಂತದ್ದು.‌ ಕೋಟಿ ಚೆನ್ನಯ್ಯರ ಕುರಿತು ಅಧ್ಯಯನ ಕೊರತೆ ಇದೆ.‌ ಮುಂದಿನ ಪೀಳಿಗೆ ಗೆ ದಾಟಿಸುವ ಕೆಲಸ ಆಗಬೇಕಾಗಿದೆ. ಅವರ ಇತಿಹಾಸಕ್ಕೆ ಯಾವ ಕಾಲಕ್ಕೂ ಚ್ಯುತಿ ಬರಬಾರದು, ಅನ್ಯಾಯ ಆಗಬಾರದು. ಅವರ ಬದುಕು, ಸಾಧನೆ, ಹುಟ್ಟು, ಅವರು ಬೆಳೆದ ಪರಿಸರ ಮೊದಲಾದವುಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.

ಎಪ್ರಿಲ್ 22 ರಿಂದ 24ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಪಡುಮಲೆಯಲ್ಲಿ ನಡೆಯುವ ಕಾರ್ಯಕ್ರಮ ಇಡೀ ಸಮಾಜಕ್ಕೆ ಚೈತನ್ಯ ತುಂಬುವ ಕೆಲಸವಾಗಿದೆ. ಸಮಾಜವನ್ನು ಒಟ್ಟುಗೂಡಿಸಿ, ವೀರ ಪುರುಷರಾದ ಕೋಟಿ ಚೆನ್ನಯ್ಯರು ಹಾಗೂ ದೇಯಿ ಬೈದೇದಿ ಅವರ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಕಾರ್ಯಕ್ರಮಕ್ಕೆ ನನ್ನ ವೈಯಕ್ತಿಕ ನೆಲೆಯಲ್ಲಿ 3 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು.

ವಿಧಾನ ಪರಿಷತ್ ಸದಸ್ಯ, ಬ್ರಹ್ಮ ಕಲಶ ಸಮಿತಿ ಕಾರ್ಯಾಧ್ಯಕ್ಷ ಕೆ. ಹರೀಶ್ ಕುಮಾರ್ ಅವರು, ಪಡುಮಲೆಯಲ್ಲಿ ಕೋಟಿ ಚೆನ್ನಯ್ಯರ ಜನ್ಮಸ್ಥಾನ, ದೇಯಿ ಬೈದೇದಿ ಸಮಾಧಿ ಸೇರಿದಂತೆ ಅಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ.‌ ಎಲ್ಲಾ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮುಂಬರುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ವಿನಂತಿಸಿದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ವೀರ ಪುರಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ‌ ಒಗ್ಗಟ್ಟಿನಿಂದ ಭಾಗಿಯಾಗೋಣ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ತಾಲೂಕು ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಮಾಣಿಂಜ ಅವರು, ಎಲ್ಲಾ ಸಮಾಜದವರಿಗೂ ಆರಾಧ್ಯ ಪುರುಷರಾದ ಕೋಟಿ ಚೆನ್ನಯ್ಯರು ಚರಿತ್ರೆಯವರು ಎಂದರು.

ವೇದಿಕೆಯಲ್ಲಿ ಮಾಜಿ ಸಚಿವ ಕೆ. ಗಂಗಾಧರ ಗೌಡ, ಸಮಿತಿಯ ಗೌರವಾಧ್ಯಕ್ಷ ಗಂಗಾಧರ ಮಿತ್ತಮಾರು, ಮಹಿಳಾ ಸಮಿತಿ ತಾಲೂಕು ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಸಂಚಲನ ಸಮಿತಿ ಸೇವಾ ಟ್ರಸ್ಟ್ ಪ್ರ. ಕಾರ್ಯದರ್ಶಿ ಭಗೀರಥ ಜಿ., ಉಪಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್., ಕೋಶಾಧಿಕಾರಿ ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.

ತಾಲೂಕು ಸಮಿತಿ ಅಧ್ಯಕ್ಷ ಉಮೇಶ್ ಎ.ಬಿ. ನಾವೂರು ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅನಿಲ್ ಕುಮಾರ್ ಪ್ರಸ್ತಾವಿಸಿದರು. ಯುವ ವಾಹಿನಿ ತಾ. ಅಧ್ಯಕ್ಷ ಎಂ.ಕೆ. ಪ್ರಸಾದ್ ವಂದಿಸಿದರು. ಸಮೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!