ಮುಂಬೈ: ಕೊರೊನಾ ಸೋಂಕು ಈಗಾಗಲೇ ಮಹಾರಾಷ್ಟ್ರದಲ್ಲಿ ವಿಪರೀತವಾಗುತ್ತಿದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಜನರನ್ನು ಉದ್ಧೇಶಿಸಿ ಮಾತನಾಡಿದ ಅವರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಲಾಕ್ಡೌನ್ ಹೇರಿಕೆ ಬಗ್ಗೆ ಯೋಚಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಠಾಕ್ರೆ, ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದರು.
ರಾಜ್ಯದಲ್ಲಿ ಇಲ್ಲಿಯವರೆಗೆ 65 ಲಕ್ಷಕ್ಕಿಂತಲೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ.ಲಸಿಕೆ ನೀಡಿದ ಬಳಿಕ ಕೂಡ ಕೆಲವರು ಸೋಂಕಿಗೊಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಸರಿಯಾದ ರೀತಿಯಲ್ಲಿ ಮುಂಜಾಗರೂಕತೆ ಕ್ರಮ ವಹಿಸದೇ ಹಾಗೂ ಮಾಸ್ಕ್ ಹಾಕಿಕೊಳ್ಳದೇ ಇರುವುದು ಎಂದಿದ್ದಾರೆ.ಮುಂದಿನ ದಿನಗಳಲ್ಲಿ ಪ್ರತಿದಿನ 2.5 ಲಕ್ಷ ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಗಳ ಸಂಖ್ಯೆ ಇದೇ ರೀತಿ ಹೆಚ್ಚಾಗುತ್ತಿದ್ದಂತೆ ಮುಂದಿನ 15-20 ದಿನಗಳಲ್ಲಿ ಆರೋಗ್ಯ ಮೂಲ ಸೌಕರ್ಯಗಳ ಕೊರತೆ ಉಂಟಾಗಬಹುದು ಎಂದು ಠಾಕ್ರೆ ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಮುಂದುವರೆದರೆ ಆರ್ಥಿಕತೆ ಅಥವಾ ಆರೋಗ್ಯ ನೋಡಬೇಕೇ ಎಂಬ ಪ್ರಶ್ನೆ ಉದ್ಭವವಾಗಲಿದ್ದು, ಲಾಕ್ಡೌನ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದರು. ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಪುಣೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ. ಅಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.