ಎ 04 ಕುಕ್ಕೇಡಿಯಲ್ಲಿ ದೇಶ ಸೇವಕರ ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಜಗತ್ತಿನಲ್ಲಿ ಯಾವುದೇ ವಿಚಾರವೇ ಇರಲಿ ಗುರುತಿಸುವಿಕೆ ಎನ್ನುವುದು ಅತ್ಯಂತ ಮಹತ್ತರವಾದ ವಿಷಯವಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಾರೇ ಆಗಲಿ ಸಾಧನೆಗಳನ್ನು ಮಾಡಿದಾಗ ಅಂತಹ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಸಂಘ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ ಎಂದು ಚಂದ್ರಶೇಖರ್ ಭಟ್ ಕೊಂಕಣಾಜೆ ತಿಳಿಸಿದರು. ಅವರು ವಿವಿಧ ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಎ 04 ರಂದು ಕುಕ್ಕೇಡಿ ಗ್ರಾಮ ಪಂಚಾಯತ್ ಅವರಣದಲ್ಲಿ ನಡೆಯುವ ದೇಶ ಸೇವಕರ ಅಭಿನಂದನಾ ಸಮಾರಂಭದ ಬಗ್ಗೆ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕ್ಲಿಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಆತ್ಮಸ್ಥೈರ್ಯದಿಂದ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುವುದು ಎಂದರೆ ಅದು ಒಬ್ಬ ವ್ಯಕ್ತಿಯ ಮನೋಸ್ಥೈರ್ಯ ಹಾಗೂ ಆತನ ಸಾಹಸ ಪ್ರವೃತ್ತಿಯನ್ನು ತೋರಿಸುತ್ತದೆ.ಅದುದರಿಂದ ಅಂತಹ ವ್ಯಕ್ತಿಗಳನ್ನು ಸಮಾಜದಲ್ಲಿ ಹುಡುಕಿ ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕೇಡಿ , ನಿಟ್ಟಡೆ ಗ್ರಾಮಗಳಲ್ಲಿರುವ ಮಾಜಿ ಹಾಗೂ ಹೊಸತಾಗಿ ಸೈನ್ಯಕ್ಕೆ ಸೇರ್ಪಡೆಗೊಂಡಿರುವ ಸೈನಿಕರು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಎ 04 ರವಿವಾರ ಬೆಳಿಗ್ಗೆ 10 ಗಂಟೆಗೆ ಕುಂಡದಬೆಟ್ಟು ಶಾಲಾ ವಠಾರದಿಂದ ಕುಕ್ಕೇಡಿ ಪಂಚಾಯತ್ ಸಭಾಂಗಣದ ವರೆಗೆ ತೆರದ ವಾಹನದಲ್ಲಿ ಸೈನಿಕರನ್ನು ಆಕರ್ಷಕ ಪಥ ಸಂಚಲನದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಗುವುದು .ನಂತರ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸೇನಾಧಿಕಾರಿ ಎಂ.ಆರ್. ಜೈನ್ ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಪೂಜಾರಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ,ಅಳದಂಗಡಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ ಸದಸ್ಯೆ ಸುಶೀಲ,ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಸುನಿಲ್ ರಾಜ್ ಪಾಣೂರು, ಚಂದ್ರಹಾಸ ಕುಂನ್ಞೊಟ್ಟು, ಸುರೇಶ್ ಭಟ್ ಕೊಂಕಣಾಜೆ, ಜಗದೀಶ್ ಒಂರ್ಬೋಡಿ, ದೇವಪ್ಪ ಕಾಜೋಡಿ ಪಂಡಿಜೆ, ಹೆರಾಲ್ಡ್ ಮೋನಿಸ್ ರನ್ನಾಡಿಪಲ್ಕೆ, ಕೃಷ್ಣಪ್ರಸಾದ್ ಪಡ್ಯೋಡಿ, ಪ್ರಸಾದ್ ನಾಯ್ಕ ಬುಳೆಕ್ಕಾರ ಇವರುಗಳನ್ನು ಸನ್ಮಾನಿಸಲಾಗುವುದು.ಅದಲ್ಲದೆ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಸಹ ಭೋಜನದ ವ್ಯವಸ್ಥೆ ಇದೆ. ಕಾರ್ಯಕ್ರಮವು ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಮುಂಜಾಗರೂಕತೆ ಕ್ರಮಗಳನ್ನು ಪಾಲಿಸಿಕೊಂಡು ನಡೆಯಲಿದೆ ಎಂದು ಮಾಹಿತಿ ನೀಡಿದರು.‌ ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಾರಂಭ ಸಮಿತಿಯ ಗೌರವಾಧ್ಯಕ್ಷ ಜನಾರ್ದನ ಪೂಜಾರಿ,ಕಾರ್ಯದರ್ಶಿ ಅನಿಲ್ ಹೆಗ್ಡೆ, ಸಲಹೆಗಾರರಾದ ಗೋಪಾಲ ಶೆಟ್ಟಿ,  ಜತೆ ಕಾರ್ಯದರ್ಶಿ ಜಗನ್ನಾಥ ದೇವಾಡಿಗ ಉಪಸ್ಥಿತರಿದ್ದರು.

error: Content is protected !!