ಉಜಿರೆ: ಪ್ರತಿಯೊಬ್ಬ ವ್ಯಕ್ತಿ ಅಥವಾ ಜೀವಿಯಿಂದ ನಾವು ಕಲಿಯಬಹುದಾದ ವಿಷಯಗಳು ಸಾಕಷ್ಟಿರುತ್ತವೆ. ಆದ್ದರಿಂದ ಕಲಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ ಎಂದು ಕ್ರೀಡಾ ನಿರೂಪಕ ವಿಜಯ್ ಗೌಡ ಅತ್ತಾಜೆ ಹೇಳಿದರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಕ್ರೀಡಾ ನಿರೂಪಣೆಯ ವಿವಿಧ ಮಜಲುಗಳು’ ಎಂಬ ವಿಚಾರದ ಕುರಿತು ನಡೆದ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಯಾವುದೇ ರಂಗದಲ್ಲಿ ಹಿಡಿತವನ್ನು ಸಾಧಿಸಬೇಕಾದರೆ ಆಳವಾದ ಜ್ಞಾನ, ವಿಭಿನ್ನ ಶೈಲಿಯ ಆಲೋಚನೆ ಸ್ವಂತಿಕೆಯೊಂದಿಗೆ ಗುರುತಿಸಿಕೊಳ್ಳುವಿಕೆ, ತಾಳ್ಮೆ ಅತೀ ಮುಖ್ಯವಾಗುತ್ತದೆ ಎಂದರು.
ಕ್ರೀಡಾ ನಿರೂಪಕರಾಗುವವರು ಅವಮಾನಗಳನ್ನು ಮೆಟ್ಟಿ ನಿಲ್ಲುವ, ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಬಗ್ಗದೇ ಕಾರ್ಯನಿರ್ವಹಿಸುವ ಚಾಕಚಕ್ಯತೆ ಹೊಂದಿರಬೇಕು. ಈ ಕ್ಷೇತ್ರದಲ್ಲಿ ನಿರೂಪಣೆ ಮಾಡಲು ಶ್ರದ್ಧೆ ಹಾಗೂ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಮುಖ್ಯ. ದುಃಶ್ಚಟಗಳಿಂದ ಮುಕ್ತರಾಗಿ, ಆರೋಗ್ಯವನ್ನು ಕಾಪಾಡುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಮಾತನಾಡಿ, ಕ್ರೀಡಾ ನಿರೂಪಣೆ, ಕ್ರೀಡೆಯ ಉತ್ಸಾಹವನ್ನು ಇಮ್ಮಡಿಗೊಳಿಸಬಲ್ಲದು. ಇದಕ್ಕಾಗಿ ಉತ್ತಮ ತಯಾರಿ ಅಗತ್ಯ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.
ಪೃಥ್ವೀಶ್ ಧರ್ಮಸ್ಥಳ ವಂದಿಸಿ, ವಿದ್ಯಾರ್ಥಿ ಶಂತನು ನಿರೂಪಿಸಿದರು.
ವರದಿ: ರಶ್ಮಿ ಯಾದವ್, ಎಸ್.ಡಿ.ಎಂ. ಕಾಲೇಜು ಉಜಿರೆ