ಉಜಿರೆ: ಮುಖ್ಯವಾಹಿನಿಯ ಅವಕಾಶಗಳನ್ನು ವಿಸ್ತರಿಸುತ್ತಾ, ಸವಾಲುಗಳನ್ನು ಎದುರಿಸುತ್ತಾ ಮುನ್ನಡೆಯಬೇಕು. ಕಲ್ಪನೆಗಳಿಗೆ ಕಡಿವಾಣ ಇರಬಾರದು, ಕಲ್ಪನಾಶಕ್ತಿಯು ಜ್ಞಾನಕ್ಕಿಂತ ಬಲಶಾಲಿ. ಮಾನವ ಸಂಪನ್ಮೂಲವಾಗುವುದು ಒಬ್ಬ ವ್ಯಕ್ತಿಯು ಪರಿಪೂರ್ಣ ಆದಾಗ ಮಾತ್ರ. ಉದಾತ್ತ ಚಿಂತನೆಗಳನ್ನು ಎಲ್ಲಾ ಕಡೆಯಿಂದಲೂ ಪಡೆದುಕೊಳ್ಳುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ತಿಳಿಸಿದರು.
ಅವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ದರ್ಪಣ ಇದು ಅರಿವಿನ ದೀವಿಗೆ’ ತಂಡ ‘ಮಡಿಲು ಸಾಂಸ್ಕೃತಿಕ ಟ್ರಸ್ಟ್’ ಹಾಗೂ ರೇಡಿಯೋ ‘ನಿನಾದ’ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಅನುಭವ ಚಿತ್ರಬರಹ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾ ನಿರೂಪಕ ವಿಜಯ ಗೌಡ ಅತ್ತಾಜೆ, ವಿಜೇತರಿಗೆ ಬಹುಮಾನ ವಿತರಿಸಿದರು. ದರ್ಪಣ ಇದು ಅರಿವಿನ ದೀವಿಗೆ ತಂಡ ರಾಜ್ಯ ಮಟ್ಟದ ಕೃಷಿ ಅನುಭವ ಚಿತ್ರಬರಹ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲದ ಮೂಲಕ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದರ್ಪಣ ತಂಡದ ಸದಸ್ಯರು, ಪದ್ಮಶ್ರೀ ಫೌಂಡೇಶನ್ ತಂಡದ ಸದಸ್ಯರು, ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಪೃಥ್ವೀಶ್ ಧರ್ಮಸ್ಥಳ ವಂದಿಸಿದರು. ವಿದ್ಯಾರ್ಥಿ ಶಂತನು ಕಾರ್ಯಕ್ರಮ ನಿರೂಪಿಸಿದರು.
ವರದಿ: ರಶ್ಮಿಯಾದವ್, ಎಸ್.ಡಿ.ಎಂ. ಕಾಲೇಜು ಉಜಿರೆ.