ದೇಶದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಗ್ರಾ.ಪಂ. ಆಗಿ ಬಂದಾರು ಆಯ್ಕೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ: ಜಿಲ್ಲೆಯ ಏಕೈಕ ಗ್ರಾಮ ಪಂಚಾಯತ್ 2015ರಿಂದ 2020ರವರೆಗೆ ಮಿಷನ್ ಅಂತ್ಯೋದಯದಡಿ ಮಾಡಿದ ಸಾಧನೆ ಪರಿಗಣನೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಿಷನ್ ಅಂತ್ಯೋದಯದಡಿ 2015ರಿಂದ 2020ರವರಗೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿದ್ದು ಬಂದಾರು ಗ್ರಾಪಂ ದೇಶದಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಗ್ರಾ.ಪಂ. ಆಗಿ ಗುರುತಿಸಿಕೊಂಡಿದೆ. ದೇಶದ ಅತಿ ಹೆಚ್ಚು ಅಭಿವೃದ್ಧಿ 75 ಗ್ರಾ.ಪಂ.ಗಳ ಪೈಕಿ ಬಂದಾರು ಕೂಡ ಒಂದಾಗಿದ್ದು, ಜಿಲ್ಲೆಯ ಏಕೈಕ ಗ್ರಾ.ಪಂ. ಆಗಿದ್ದು ಪ್ರಧಾನಿ ನರೇಂದ್ರ ಮೋದಿ‌ ಪರವಾಗಿ ಅವರ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ‌ಮೂಲಕ ಅಭಿನಂದನೆ ಸಲ್ಲಿಸಿದರು.

75ನೇ ಸ್ವತಂತ್ರ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರಕಾರ ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅವಧಿಯಲ್ಲಿ ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ 75 ಗ್ರಾಮ ಪಂಚಾಯತಗಳ ಪೈಕಿ ಒಂದಾಗಿದೆ‌. ರಾಜ್ಯದಲ್ಲಿ ಕೇವಲ 7 ಗ್ರಾಮ ಪಂಚಾಯತ್ ಗಳು ಈ ಪಟ್ಟಿಯಲ್ಲಿವೆ.

ವಿಡಿಯೋ ಕಾನ್ಫರೆನ್ಸ್:
ಗ್ರಾ.ಪಂ. ಮಟ್ಟದಲ್ಲಿ 2015ರಿಂದ 2020ರವರಗೆ ಮಿಷನ್ ಅಂತ್ಯೋದಯದಡಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಕ್ಕಾಗಿ ಗುರುತಿಸಲಾಗಿದೆ. ಮಾ. 12ರಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಬೇಕಿತ್ತು, ಆದರೆ ಪ್ರಧಾನಿ‌ಗಳ ಕಾರ್ಯದರ್ಶಿ ಅವರು ಮಾತನಾಡಿ ಹಿಂದಿನ ಹಾಗೂ ನೂತನ ಪಂಚಾಯತ್ ಆಡಳಿತ ಸಮಿತಿಯನ್ನು ಅಭಿನಂದಿಸಿದರು. ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಕೆ. ಗೌಡ, ಉಪಾಧ್ಯಕ್ಷ ಗಂಗಾಧರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ‌ಹಾಗೂ ಸಿಬ್ಬಂದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ‌ ಭಾಗವಹಿಸಿದ್ದರು. ಈ ವಿಶೇಷ ಗೌರವಕ್ಕೆ ಪಾತ್ರವಾದ ಕುರಿತು ಪರಿಗಣನೆಯಾದ 2015ರಿಂದ 2020ರ ನಡುವೆ ಬಂದಾರು ಗ್ರಾ.ಪಂ. ಅಧ್ಯಕ್ಷರಾಗಿದ್ದ ಉದಯ ಬಿ. ಕೆ. ಅವರು ಸಂತಸ ವ್ಯಕ್ತಪಡಿಸಿದರು.

ಎಲ್ಲಾ ವಿಭಾಗಗಳ ಪರಿಗಣನೆ:
ಈ ಗೌರವಕ್ಕೆ ಮಿಷನ್ ಅಂತ್ಯೋದಯದಡಿ 2015ರಿಂದ 2020ರವರಗೆ ಮಾಡಿದ ಅಭಿವೃದ್ಧಿ ಕಾರ್ಯಗಳ ಪ್ರತಿಯೊಂದು ಅಂಶಗಳಿಗೂ ಅಂಕಗಳನ್ನು ನೀಡಲಾಗಿದೆ. ಉದಾಹರಣೆಗೆ ನರೇಗಾ ಯೋಜನೆ, ಸ್ವಚ್ಛತೆ, ಸರಕಾರಿ ಯೋಜನೆಗಳು ಸಾರ್ವಜನಿಕರನ್ನು ತಲುಪುವುದು ಹೀಗೆ ಪ್ರತೀ ವಿಭಾಗಗಳಲ್ಲೂ ಹೆಚ್ಚು ಅಂಕಗಳನ್ನು ಪಡೆದು ಈ ವಿಶೇಷ ಗೌರವಕ್ಕೆ ಬಂದಾರು ಗ್ರಾ.ಪಂ. ಪಾತ್ರವಾಗಿದೆ.

ಗ್ರಾ.ಪಂ.ನ ಕಾರ್ಯಗಳು ಸಾರ್ವಜನಿಕರನ್ನು ಪರಿಣಾಮಕಾರಿಯಾಗಿ ತಲುಪಿ, ಜನಸಾಮಾನ್ಯರೂ ಅಭಿವೃದ್ಧಿ ಹೊಂದುವಂತಾಗಲಿ. ವಿಶೇಷ ಗೌರವಕ್ಕೆ ಪಾತ್ರವಾದ ಬಂದಾರು ಗ್ರಾಮ ಪಂಚಾಯತ್ ಗೆ ‘ ಪ್ರಜಾಪ್ರಕಾಶ ನ್ಯೂಸ್’ ತಂಡದ ಶುಭಾಶಯಗಳು.

 

error: Content is protected !!