ಬೆಳ್ತಂಗಡಿ: ಮಂಗಳೂರು-ಚಿಕ್ಮಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯ ಒಂದನೇ ಹಿಮ್ಮುರಿ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಇಬ್ಬರು ಶಿವರಾತ್ರಿ ಪಾದಯಾತ್ರಿಗಳು ಹಾಗೂ ಟಿ.ಟಿ.ಯಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಪಾದಚಾರಿಗಳಾದ ಹಾಸನದ ಅರ್ಜುನ್ ಕುಮಾರ್(29), ಧನರಾಜ್(16) ಹಾಗೂ ಟಿ ಟಿ ವಾಹನದಲ್ಲಿದ್ದ ದಿಲೀಪ್(19), ವಿಶ್ವನಾಥ(18), ಲಾವಣ್ಯ(18), ಐಶ್ವರ್ಯಾ(21), ಶ್ರೇಯಾ(18), ಯಕ್ಷಿತ್(21), ಯತೀಶ್ (21), ಅನನ್ಯಾ(19) ಹಾಗೂ ಚಾಲಕ ರಾಜೇಶ್(32) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಕಕ್ಕಿಂಜೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿ ಕಟೀಲು ಸಮೀಪದ ಚೆಂಡೆ ಕಲಾವಿದರ ತಂಡ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುವಾಗ ಅಪಘಾತ ನಡೆದಿದೆ.
ಕೊಟ್ಟಿಗೆಹಾರ ಕಡೆಯಿಂದ ಪ್ರತಿವರ್ಷದಂತೆ ಈ ಬಾರಿಯೂ ಆಗಮಿಸುತ್ತಿರುವ ಶಿವರಾತ್ರಿ ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್ ಬಳಿಕ ಧರೆಗೆ ಡಿಕ್ಕಿ ಹೊಡೆದಿತ್ತು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.