ಸಂಘಟನೆ ಬಲಗೊಳ್ಳಲು ದೈವಾರಾಧನೆಯೇ ಪ್ರೇರಣೆ: ಕೊಪ್ಪ, ಗೌರಿಗದ್ದೆ ವಿನಯ ಗುರೂಜಿ ಅಭಿಮತ:  ಮರೋಡಿ ತಾಳಿಪಾಡಿ- ಪಲಾರಗೋಳಿ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ಪ್ರತಿಷ್ಠಾ ಕಲಶಾಭಿಷೇಕ, ಧಾರ್ಮಿಕ ಸಭೆ

ಬೆಳ್ತಂಗಡಿ: ಕರಾವಳಿಯಲ್ಲಿ ಧರ್ಮ ಉಳಿದಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಇಲ್ಲಿರುವ ದೈವಸ್ಥಾನಗಳು. ಇಲ್ಲಿ ಸಂಘಟನೆಗಳು ಬಲಗೊಳ್ಳಲು ದೈವಾರಾಧನೆಯೇ ಮುಖ್ಯ ಪ್ರೇರಣೆ ಎಂದು ಕೊಪ್ಪ ಗೌರಿಗದ್ದೆಯ ವಿನಯ ಗುರೂಜಿ ನುಡಿದರು.

ತಾಲ್ಲೂಕಿನ ಮರೋಡಿ ತಾಳಿಪಾಡಿ- ಪಲಾರಗೋಳಿ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಪ್ರತಿಷ್ಠಾ ಕಲಶಾಭಿಷೇಕ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ನಾನು ಎಂಬುದು ನಶ್ವರ. ಒಂದಲ್ಲ ಒಂದು ದಿನ ಮಣ್ಣಿಗೆ ಸೇರಲೇಬೇಕು. ಮಣ್ಣಾದ ಬಳಿಕವೂ ನಮ್ಮ ಹೆಸರು ಉಳಿಯಬೇಕಾದರೆ ಕೋಟಿ- ಚೆನ್ನಯರಂತೆ ಬದುಕಬೇಕು. ಮನುಷ್ಯ ಧರ್ಮದಿಂದ ಪ್ರಜೆ ಆಗುತ್ತಾನೆ. ಪ್ರಜ್ಞೆಯಿಂದ ಮಾನವ ಮಾಧವ ಆಗುತ್ತಾನೆ ಎಂಬುದಕ್ಕೆ ಸಾಕ್ಷಿ ಕೋಟಿ- ಚೆನ್ನಯರು ಎಂದು ಹೇಳಿದರು.

ಕುಟುಂಬ, ಸ್ನೇಹಿತರು ಅಥವಾ ಇನ್ಯಾರಿಗೋ ನಮ್ಮ ಶರೀರ ಮತ್ತು ಆಯುಷ್ಯವನ್ನು ಸವೆಸಿದ್ದೇವೆ. ಅದೆಲ್ಲ ನಮ್ಮನ್ನು ಬಂಧನದಿಂದ ಮಣ್ಣಿಗೆ ತೆಗೆದುಕೊಂಡು ಹೋಗುತ್ತದೆ. ಯಾವಾಗ ನಾವು ದೇಶಕ್ಕಾಗಿ ಅಥವಾ ಶೋಷಣೆಯ ವಿರುದ್ಧ ನಮ್ಮನ್ನು ಸವೆಸುತ್ತೇವೆಯೋ ಆಗಾಗ ನಾವೂ ಕೋಟಿ- ಚೆನ್ನಯರಾಗುತ್ತೇವೆ. ಸತ್ಯಕ್ಕೆ ಹೆಸರಾದ ಕೋಟಿ- ಚೆನ್ನಯರಿಗೆ ಹಿಂದಿನಿಂದ ಬಾಣ ಬಿಟ್ಟರೂ ಅವರು ಸಮಾಜಕ್ಕೆ ಒಗ್ಗಟ್ಟು ಮತ್ತು ಅಹಿಂಸೆಯ ಸಂದೇಶ ನೀಡಿದರು. ಇಂದು ಮಹಾನ್ ತ್ಯಾಗಿಗಳಾಗಿ, ದೈವಗಳಾಗಿ, ಎಷ್ಟೋ ಮಂದಿಗೆ ಹೀರೋಗಳಾಗಿ ನಿಂತಿದ್ದಾರೆ ಎಂದಾದರೆ ಅವರ ಆದರ್ಶಗಳಿಂದ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮರೋಡಿಯ ಒಗ್ಗಟ್ಟು ಎಲ್ಲರಿಗೂ ಮಾದರಿ. ಇಲ್ಲಿನ ಗರಡಿಯಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಪ್ರತಿ ವರ್ಷ ₹ 50 ಸಾವಿರ ನೀಡುತ್ತೇನೆ ಎಂದು ವಿನಯ ಗುರೂಜಿ ಹೇಳಿದರು.

ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಕೋಟಿ ಚೆನ್ನಯರು ಸಾಮಾನ್ಯರಂತೆ ಮನುಷ್ಯರಾಗಿ ಹುಟ್ಟಿ ಬಂದವರು. ಅವರು ಶ್ರೇಷ್ಠವಾದ ಸಾಧನೆಯಿಂದ ದೈವಿಪುರುಷರಾಗಿದ್ದಾರೆ. ಹಾಗಾಗಿ, ಕರಾವಳಿಯಲ್ಲಿ 220ಕ್ಕೂ ಅಧಿಕ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಲು ಶಕ್ತಿ ನೀಡಿದ್ದಾರೆ ಎಂದರು.

ಆಧುನೀಕರಣದ ಪ್ರಭಾವದಿಂದ ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದೆ. ಶ್ರದ್ಧಾಕೇಂದ್ರಗಳ‌ ಮೂಲಕ ಮಕ್ಕಳಲ್ಲಿ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೆಲಸ ನಡೆಯಬೇಕು ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಮರೋಡಿ ಗರಡಿಯು ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿನ ಭಕ್ತರ ಒಗ್ಗಟ್ಟಿನಿಂದಾಗಿ ಈ ಕ್ಷೇತ್ರವು ಭವಿಷ್ಯದಲ್ಲಿ ಉತ್ತುಂಗಕ್ಕೆ ಏರಲಿದೆ ಎಂದು ಹೇಳಿದರು.

ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿ, ಅಜಿಲ ಸೀಮೆಯಲ್ಲಿಯೇ ಇಷ್ಟೊಂದು ಭವ್ಯವಾದ ಗರಡಿ ಕಂಡಿಲ್ಲ. ಇದು ನಮ್ಮ ಸೀಮೆಗೆ ಹೆಮ್ಮೆಯ ವಿಷಯ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಕಳದ ವಕೀಲ ವಿಜಯ ಕುಮಾರ್, ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ, ಶಿರ್ತಾಡಿ ಪ್ರಭಾ ಕ್ಲಿನಿಕ್ ನ ಡಾ.ಆಶೀರ್ವಾದ್, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್., ಮುಂಬೈ ಉದ್ಯಮಿ ಸುರೇಶ್ ಪೂಜಾರಿ, ಬಜಗೋಳಿ ಜಿಲ್ಲಾ ಪಂಚಾಯತಿ ಸದಸ್ಯ ಉದಯ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಂ.ನಮಿರಾಜ ಪಾಂಡಿ, ಕಲಶಾಭಿಷೇಕ ಸಮಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಮುಂಬೈ ಕಲಶಾಭಿಷೇಕ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಕನರೊಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್, ಜಾತ್ರೋತ್ಸವ ಸಮಿತಿಯ ದಾಮೋದರ ಪೂಜಾರಿ ಇದ್ದರು.

ಕಲಶಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿದರು. ದಯಾನಂದ ಉಪ್ಪೂರು ಕಾರ್ಯಕ್ರಮ‌ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ, ದೈವ ಕೊಡಮಣಿತ್ತಾಯ ನೇಮೋತ್ಸವ ನಡೆಯಿತು.

error: Content is protected !!