ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಂತೆ ಆಯೋಜಿಸಲಾದ 18 ನೇ ವರ್ಷದ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ವಿತರಣಾ ಸಮಾರಂಭವು ಫೆ 13 ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ನಡೆಯಲಿದೆ.
ಖ್ಯಾತ ಚಲನಚಿತ್ರ ನಟ ಬೆಂಗಳೂರಿನ ಡಾ. ಶ್ರೀಧರ್ ಪುರಸ್ಕಾರ ನೀಡಿ ವಿಜೇತರನ್ನು ಗೌರವಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಶುಭಾಶಂಸನೆ ಮಾಡಲಿರುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಚಿತ್ರ ಕಲಾವಿದ ಬಾಗೂರು ಮಾರ್ಕಂಡೇಯ ಅವರಿಂದ ಕುಂಚ-ಗಾನ-ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಅಂಚೆ-ಕುಂಚ ಸ್ಪರ್ಧೆ: ಅಂಚೆ ಕಾರ್ಡಿನಲ್ಲಿ ಕುಂಚವಾಡಿಸಿ ಆಕರ್ಷಕ ಚಿತ್ರಗಳನ್ನು ಬಿಡಿಸುವ ರಾಜ್ಯ ಮಟ್ಟದ ಸ್ಪರ್ಧೆಯೇ ಅಂಚೆ-ಕುಂಚ ಸ್ಪರ್ಧೆ. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ – ಹೀಗೆ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಕಳೆದ 18 ವರ್ಷಗಳಲ್ಲಿ 2,22,950 ಸ್ಪರ್ಧಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.