₹93 ಕೋಟಿ ರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಸಚಿವ ಗೋವಿಂದ ಕಾರಜೋಳ ಭಾನುವಾರದ ಧರ್ಮಸ್ಥಳ ಭೇಟಿಯ ಸಂದರ್ಭ ಶಾಸಕರ ಹರೀಶ ಪೂಂಜ ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟಂತೆ ಎರಡು ಮನವಿಗಳನ್ನು ನೀಡಿದಾಗ ಸಚಿವರು ಮನವಿಗಳನ್ನು ಓದಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.

40 ಕೋಟಿ ರೂ. ವೆಚ್ಚದ ಬಂದಾರು-ಪಟ್ರಮೆ ಸಂಪರ್ಕ ಕಲ್ಪಿಸುವ ಮೈಪಾಲ ಎಂಬಲ್ಲಿ ಸೇತುವೆ ನಿರ್ಮಾಣ, 5054 ಲೆಕ್ಕ ಶೀರ್ಷಿಕೆಯಡಿ ವಿಶೇಷ ಅನುದಾನ ಯೋಜನೆಯಡಿ ಗ್ರಾಮೀಣ ರಸ್ತೆಗಳಿಗೆ 25 ಕೋಟಿ ರೂ. ಅನುದಾನ, 18 ಕಿ.ಮೀ. ಉದ್ದದ ಧರ್ಮಸ್ಥಳ, ತೋಟತ್ತಾಡಿ, ಚಿಬಿದ್ರೆ, ಪುದುವೆಟ್ಟು, ಕಾಯರ್ ತಡ್ಕ- ನಿಡ್ಲೆ ರಸ್ತೆ ಅಭಿವೃದ್ಧಿಗಾಗಿ 18 ಕೋಟಿ ರೂ. ಅನುದಾನ ಹಾಗೂ ಪ.ಜಾತಿ, ಪ.ಪಂ ಕಾಲೋನಿ ರಸ್ತೆ ಅಭಿವೃದ್ಧಿಗಾಗಿ ರೂ. 10 ಕೋಟಿ ಅನುದಾನ, ಹೀಗೆ ಒಟ್ಟು 93 ಕೋಟಿ ರೂ.ಗಳ ಬೇಡಿಕೆಯ ಮನವಿಯನ್ನು ಶಾಸಕರು ನೀಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಸಂದರ್ಭ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಕೊಕ್ಕಡ-ಪೆರಿಯಶಾಂತಿಯಿಂದ ಧರ್ಮಸ್ಥಳಕ್ಕೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಕೆಲವು ಕಡೆ ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯ ಜಾಗವಿದ್ದು ಅಡಚಣೆಯಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಜಾಗ ತೆರವುಗೊಳಿಸಿ ಅವರಿಗೆ ಸರ್ಕಾರದಿಂದ ಬದಲಿ ಜಾಗ ನೀಡುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದರು.

ನೇತ್ರಾವತಿ ಸೇತುವೆ 1961ರಲ್ಲಿ ನಿರ್ಮಾಣಗೊಂಡಿದ್ದು ತುಂಬಾ ಹಳೆಯದಾಗಿರುವುದರಿಂದ ಹೊಸ ಸೇತುವೆ ನಿರ್ಮಿಸುವಂತೆಯೂ ಡಾ.ಹೆಗ್ಗಡೆ ಸಲಹೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದೆಲ್ಲೆಡೆ ಆದ ಪ್ರಗತಿಯ ಸಮಗ್ರ ಮಾಹಿತಿಯನ್ನು ಹೆಗ್ಗಡೆಯವರು ನೀಡಿದರು.

error: Content is protected !!