ಬ್ಯಾಂಕ್ ಗ್ರಾಹಕರ ಸೇವೆ ನಿರ್ಲಕ್ಷ್ಯ ವಿರುದ್ಧ ಆಕ್ರೋಶ: ಭಾಷಾ ಸಮಸ್ಯೆ, ಸೇವೆ ಸಮರ್ಪಕ ನೀಡಲು ಆಗ್ರಹ: ಕಕ್ಕಿಂಜೆ, ಬ್ಯಾಂಕ್ ಮುಂಭಾಗ ಗ್ರಾಹಕರ ಪ್ರತಿಭಟನೆ

ಮುಂಡಾಜೆ: ಸಿಂಡಿಕೇಟ್ ಬ್ಯಾಂಕ್ ವೀಲೀನಗೊಂಡು ಕೆನರಾ ಬ್ಯಾಂಕ್ ಆಗಿದ್ದು ಆದರೂ ಕಕ್ಕಿಂಜೆ ಕೆನರಾ ಬ್ಯಾಂಕ್ ನಲ್ಲಿ‌ ಗ್ರಾಹಕರ ಸೇವೆಗಳು ‌ಸಮರ್ಪಕವಾಗಿ ಲಭಿಸುತ್ತಿಲ್ಲ, ಭಾಷಾ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ‌ ನಡೆಸಿದರು.

ಕಕ್ಕಿಂಜೆ ಶಾಖೆಗೆ ಚಾರ್ಮಾಡಿ, ಕಕ್ಕಿಂಜೆ, ತೋಟತ್ತಾಡಿ, ಚಿಬಿದ್ರೆ, ನೆರಿಯಾ, ಮುಂಡಾಜೆ ಗ್ರಾಮದಿಂದ ಗ್ರಾಹಕರು ಆಗಮಿಸುತ್ತಾರೆ. ಗ್ರಾಮೀಣ ಭಾಗದ ಬ್ಯಾಂಕ್ ಇದಾಗಿದ್ದು, ಗ್ರಾಹಕರು ಸ್ಥಳೀಯ ಭಾಷೆಯಾದ ಕನ್ನಡ,ತುಳು ಮಾತ್ರ ಮಾತನಾಡುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಸಮಸ್ಯೆಗಳು ಎದುರಾದಾಗ ಸಿಬ್ಬಂದಿ, ಗ್ರಾಹಕರ ಜೊತೆ ಸರಿಯಾಗಿ ಸ್ಪಂದಿಸುತ್ತಿಲ್ಲ.‌ಇರುವ ಸಿಬ್ಬಂದಿಗೆ ಕನಿಷ್ಠ ಕನ್ನಡ ಭಾಷೆಯ ಅರಿವಿಲ್ಲ, ಇದರಿಂದ ಸಂವಹನ ಸಮಸ್ಯೆ ಎದುರಾಗುತ್ತಿದೆ. ಎಟಿಎಂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಪಾಸ್ ಬುಕ್ ಎಂಟ್ರಿ ಇಲ್ಲದೆ ಕೆಲವು ವರ್ಷಗಳೇ ಆಗಿದೆ. ವಿನಾಕಾರಣ ಖಾತೆಯಿಂದ ಶುಲ್ಕ ಕಡಿತ ಮಾಡಲಾಗುತ್ತಿದೆ. ಹೊಸ ಅಕೌಂಟ್ ತೆರೆಯಲು ಹತ್ತಾರು ಬಾರಿ ಬ್ಯಾಂಕಿಗೆ ಹೋಗಬೇಕಾಗುತ್ತದೆ. ನಾಮಿನಿಗೆ ಖಾತೆ ಬದಲಾಯಿಸಲು ಕೆಲವು ವರ್ಷ ಕಳೆದರೂ ಆಗುವುದಿಲ್ಲ ಮೊದಲಾದ ಸಮಸ್ಯೆಗಳು ಇಲ್ಲಿನ ಗ್ರಾಹಕರನ್ನು‌ ಕಾಡುತ್ತಿವೆ.‌ ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಗ್ರಾಹಕರ ಕೆಲಸವು ಸಮರ್ಪಕವಾಗಿ ನಡೆಯದೆ ಸಮಸ್ಯೆ ಎದುರಾಗುತ್ತಿದೆ ಎಂದು ಪ್ರತಿಭಟನಾ ನಿರತ ಗ್ರಾಹಕರು ಆಗ್ರಹಿಸಿದ್ದಾರೆ.

ಬೇಡಿಕೆಗಳು:
ಪ್ರತಿಭಟನಾ ನಿರತರು, ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಹಕರ ಮೀಟಿಂಗ್ ಆಯೋಜಿಸಬೇಕು, ಗ್ರಾಮೀಣ ಭಾಗದ ಬ್ಯಾಂಕ್ ಸಿಬ್ಬಂದಿಗಳಿಗೆ ಸ್ಥಳೀಯ ರಾಜ್ಯ ಭಾಷೆ ಕನ್ನಡ ಕಡ್ಡಾಯವಾಗಿ ಗೊತ್ತಿರಬೇಕು ಜೊತೆ ಸೇವೆ ಸರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!