ಮಗ ಪೊಲೀಸ್ ಆದರೂ ಬೀದಿಗೆ ಬಿದ್ದ ಮಹಾತಾಯಿ!: ಗೇರುಕಟ್ಟೆಯಲ್ಲಿ ಅಮಾನವೀಯ ಘಟನೆ: ಸಮಸ್ಯೆಗೆ ಸ್ಪಂದಿಸಿದ 112 ಸಹಾಯವಾಣಿ

ಬೆಳ್ತಂಗಡಿ: ಇದು‌ 5 ಮಕ್ಕಳನ್ನು ಹೊಂದಿರುವ ಮಹಾತಾಯಿಯ ದುಸ್ಥಿತಿಯ‌ ಕಥೆ‌. ಈಕೆಯ ಒಬ್ಬ ಮಗ ಪೊಲೀಸ್, ಮಗಳೊಬ್ಬರು ಆಶಾಕಾರ್ಯಕರ್ತೆ ಆದರೂ ಬೀದಿಯಲ್ಲಿ ವೃದ್ಧ ತಾಯಿಯನ್ನು ಬಿಟ್ಟುಹೋದ ಅಮಾನವೀಯ ಘಟನೆ ಕಳಿಯ ಗ್ರಾಮದಲ್ಲಿ ನಡೆದಿದೆ.

ಕಳಿಯ ಗ್ರಾಮದ ನಾಳ ಎಂಬಲ್ಲಿ ವಯೋವೃದ್ಧೆಯನ್ನು ಅವರ ಮನೆಯವರೇ ರಸ್ತೆಬದಿ ಬಿಟ್ಟುಹೋಗಿರುವ ಅಮಾನವೀಯ‌ ಘಟನೆ ಫೆ.1ರಂದು ನಡೆದಿದೆ. ಘಟನೆ ಬೆಳಕಿಗೆ ಬಂದು ಮಾಹಿತಿ ಸಂಗ್ರಹ ಸಂದರ್ಭ ಈಕೆಗೆ‌ 5‌ ಮಕ್ಕಳಿದ್ದು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿ ಇದ್ದಾರೆ. ಒಬ್ಬ ಪುತ್ರ ಮಂಗಳೂರಿನಲ್ಲಿ ಪೊಲೀಸ್ ಆಗಿ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ. ಇನ್ನಿಬ್ಬರು ಪುತ್ರರು ಖಾಸಗಿ‌ ಕೆಲಸ ಮಾಡುತ್ತಿದ್ದು, ಉತ್ತಮ ‌ರೀತಿಯಲ್ಲಿ‌ ಜೀವನ‌ ಸಾಗಿಸುತ್ತಿದ್ದಾರೆ. ಪುತ್ರಿಯರಲ್ಲಿ ಒಬ್ಬರು ಗೃಹಿಣಿಯಾಗಿದ್ದು, ಮತ್ತೊಬ್ಬರು ಆಶಾ ಕಾರ್ಯಕರ್ತೆಯಾಗಿದ್ದಾರೆ. ಎಲ್ಲರಿಗೂ ವಿವಾಹವಾಗಿದ್ದು, ಉತ್ತಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ವೃದ್ಧೆಯ ಮಕ್ಕಳ ಅಮಾನವೀಯ ‌ನಡೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವೃದ್ಧೆಯನ್ನು ಬಿಟ್ಟು ಹೋಗಿರುವ ಬಗ್ಗೆ ದ.ಕ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ರಕ್ಷಿಸಿದೆ.

ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ವೃದ್ಧೆಯನ್ನು ಅವರ ಪುತ್ರಿಯ ಮನೆಗೆ ಕಳುಹಿಸಲಾಗಿದೆ‌. ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮನೆಯವರನ್ನು ಸಂಪರ್ಕಿಸಿದ್ದು ಮಾಹಿತಿ ಪಡೆದು ಅವರ ಮೇಲೆ ಕ್ರಮ ಜರುಗಿಸುವ ಮಾಹಿತಿ ಲಭ್ಯವಾಗಿದೆ.

error: Content is protected !!