ಹರೀಶ್ ಪೂಂಜರಿಗೆ ಅನುದಾನದಲ್ಲಿ ಭೀಮಪಾಲು: ಸಮರ್ಪಕ ಕಾರ್ಯನಿರ್ವಹಿಸಲು ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ ಸಚಿವ ಈಶ್ವರಪ್ಪ: ತಾಂಟ್ರೇ ಬಾ ತಾಂಟ್ ಹೇಳಿಕೆಗೆ ಖಾರವಾಗಿ ಪ್ರತ್ಯುತ್ತರ ನೀಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನನ್ನ ಅಚ್ಚು ಮೆಚ್ಚಿನ ಶಾಸಕರಲ್ಲೊಬ್ಬ. ಕ್ಷೇತ್ರದ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ. ಪಂ.ಸದಸ್ಯರೆಲ್ಲ ಹರೀಶ್ ‌ಅವರಂತೆ ಆಗಬೇಕು. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಶಾಸಕರು ಮಾಡುತ್ತಾರೆ. ಪೂಂಜ ಅವರು ಅನುದಾನದ ಕೇಳುವುದರಲ್ಲಿ ನಿಸ್ಸೀಮ, ಅವರು ನನಗೆ ಸಹೋದರನಿದ್ದಂತೆ. ಅವರು ಕೇಳುವ ವಿಧಾನ ಹೇಗಿರುತ್ತದೆಂದರೆ ಹೆಚ್ಚು ಕೆಲಸ ಮಾಡುವವರಿಗೆ ಹೆಚ್ಚು ಅನುದಾನ ನೀಡಬೇಕಾಗುತ್ತದೆ. ಹೇಗೆಂದರೆ ಹೆಚ್ಚು ಕೆಲಸ ಮಾಡುತ್ತಿದ್ದ ಭೀಮನಿಗೆ ಕುಂತಿ ಹೆಚ್ಚು ಆಹಾರ ನೀಡಿದಂತೆ, ಅನುದಾನ ನೀಡುವ ವಿಚಾರದಲ್ಲಿಯೂ ಹರೀಶ್ ಪೂಂಜ ಅವರಿಗೆ ಭೀಮಪಾಲು ನೀಡುತ್ತೇನೆ. ಎಂದು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಉಜಿರೆಯ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ, ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ‌ ಬೆಂಬಲಿತರು ಜಯಭೇರಿಗಳಿಸಲು‌ ಕಾರಣೀಕರ್ತರಾದ ಕಾರ್ಯಕರ್ತರಿಗೆ, ಮತದಾರರಿಗೆ, ಚುನಾಯಿತರಾದ ಗ್ರಾ.ಪಂ. ಸದಸ್ಯರಿಗೆ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ‌ ಅವರು ಅಭಿನಂದನಾ ಭಾಷಣ ಮಾಡಿದರು.

ಗ್ರಾಮದ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ರಸ್ತೆಯಂತಹ ಮೂಲಸೌಲಭ್ಯಗಳ ಅಭಿವೃದ್ಧಿಯ ಜೊತೆಗೆ ಭಾರತೀಯ ಮೌಲ್ಯಗಳನ್ನು‌ ಉಳಿಸಿ, ಬೆಳೆಸುವಲ್ಲಿಯೂ ಗ್ರಾ.ಪಂ. ಸದಸ್ಯರುಗಳು ತತ್ಪರರಾಗಿರಬೇಕು. ವಿದ್ಯಾವಂತರ, ನಗರದವರ ಪಕ್ಷ ಮಾತ್ರವಲ್ಲ ಇದು ಹಳ್ಳಿಗರ ಪಕ್ಷ ಎಂದು ತೋರಿಸಿಕೊಟ್ಟಿದ್ದೀರಿ. ಸದಸ್ಯರು ರೈತರ ಅಭಿವೃದ್ಧಿಯೇ ಗ್ರಾಮದ, ದೇಶದ ಅಭಿವೃದ್ಧಿ, ಗ್ರಾಮದಲ್ಲಿ ನೀರು, ನೈರ್ಮಲ್ಯ, ವಿದ್ಯುತ್, ರಸ್ತೆಯ ಜೊತೆಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ‌ ಹಿಡಿಯಲೇಬೇಕು‌ ಎಂದು ತಿಳಿ ಹೇಳಿದರು.

ಬಿಜೆಪಿಯ ಕಾರ್ಯಕರ್ತರು ದೇಶದ ಋಣವನ್ನು ತೀರಿಸುವಂತಹವರು. ರಾಷ್ಟ್ರಭಕ್ತರ ಬಲಿದಾನವನ್ನು ಎಂದೂ ಮರೆಯಲಾರೆವು. ಗೋವುಗಳ ಕಳ್ಳತನ, ಲವ್ ಜೆಹಾದ್ ನ ತಡೆಯುವಲ್ಲಿ ಗ್ರಾ.ಪಂ. ಸದಸ್ಯರು ಜಾಗೃತರಾಗಿರಬೇಕು ಎಂದರು.
ಸಂಸದ, ಶಾಸಕನಾಗುವುದು ಕಷ್ಟವೇನಲ್ಲ. ಆದರೆ ಗ್ರಾ.ಪಂ. ಸದಸ್ಯನಾಗುವುದು ಅಷ್ಟು ಸುಲಭವಲ್ಲ. ಹೀಗಾಗಿ ನಿಮ್ಮ ಗೆಲುವು ಅಭೂತಪೂರ್ವವಾದದ್ದು ಎಂದು ಪ್ರಶಂಸಿಸಿದ ಅವರು, ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕಾಂಗ್ರೆಸ್ ಗೆ ಇನ್ನೊಂದು ಜೆಡಿಎಸ್ ಗೆ ಇರಲಿ ಎಂದು ಕೊಟ್ಟಿದ್ದೇವೆ. ಅದೇ ರೀತಿ ಬೆಳ್ತಂಗಡಿಯಲ್ಲಿ ಕೇವಲ ನಾಲ್ಕು‌ ಪಂ.ಗಳನ್ನು ಸಿದ್ಧರಾಮಯ್ಯ, ಪರಮೇಶ್ವರ್, ಡಿಕೆಶಿ ಹಾಗೂ ಖರ್ಗೆಗೆ ಸ್ಯಾಂಪಲ್ ಆಗಿ ಬಿಟ್ಟು ಕೊಟ್ಟು ಉಳಿದ 42 ಪಂ.ಗಳನ್ನು‌ ಬಿಜೆಪಿ ಗೆದ್ದುಕೊಂಡಿರುವುದು ಉತ್ತಮ ಸಾಧನೆ ಎಂದರು.

ಗ್ರಾಮದ ಅಭಿವೃದ್ಧಿ‌ ಹೇಗೆ ಮಾಡಬೇಕು ಎಂಬ ಉದ್ಧೇಶದಿಂದ ಫೆ.8 ರಿಂದ ಗ್ರಾ.ಪಂ. ಸದಸ್ಯರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗುವುದು. ಸದಸ್ಯರು ತಪ್ಪದೇ ಭಾಗವಹಿಸಬೇಕು. ರಾಜ್ಯವು ಪಂಚಾಯತ್ ಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಿದೆ. ಕೇಂದ್ರದಿಂದ ಒಂದು ಪ್ರತಿ ಪಂ.ಗೆ ಒಂದು‌ ಕೋಟಿ ರೂ.ಅನುದಾನ ಬರುತ್ತದೆ. ಅದರ ಸದ್ಭಳಕೆಯ ಬಗ್ಗೆ ಗಮನ ಹರಿಸಬೇಕು. ಏನಿದ್ದರೂ ಮತದಾರನ ಸಂತೃಪ್ತಿಯೇ ನಮ್ಮ ಗುರಿಯಾಗಿರಬೇಕು ಎಂದು ಸಚಿವರು ತಿಳಿಸಿದರು.

ಸಚಿವ ಎಸ್. ಅಂಗಾರ ಮಾತನಾಡಿ, 26 ವರ್ಷದ ನನ್ನ ಶಾಸಕತ್ವದ ಅವಧಿಯಲ್ಲಿ ಕೇವಲ ಏಳೂವರೆ ವರ್ಷ ಮಾತ್ರ ಬಿಜೆಪಿ ಸರಕಾರ ಇದ್ದದ್ದು. ಪಕ್ಷದ ಅಪೇಕ್ಷೆ ಹಾಗೂ ಸಂಘಟನೆಯ ಉದ್ದೇಶವನ್ನಿಟ್ಟು ಕೊಂಡು ಕರ್ತವ್ಯ ನಿರ್ವಹಿಸಿದ್ದೇನೆ. ಯಾವುದೋ ಕಾರಣಕ್ಕೆ ದುಡುಕುವ ಸ್ವಭಾವದಿಂದ ನಮಗೆ ಮತದಾರರು ಕೊಟ್ಟ ಅವಕಾಶವನ್ನು‌ ಕಳೆದುಕೊಳ್ಳುವಂತಾಗಬಾರದು. ಯಾವುದೇ ಸಂಶಯ, ಗೊಂದಲಗಳಿಗೆ ನಮ್ಮ ನಡವಳಿಕೆಗಳು‌ ಕಾರಣವಾಗಬಾರದು ಎಂದರು.

ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ಕಟ್ಟಕಡೆಯವನಿಗೆ ತುತ್ತು ಅನ್ನ ನೀಡುವ ಕೆಲಸ ಗ್ರಾ.ಪಂ. ಸದಸ್ಯರದ್ದಾಗಿದೆ. ಪಂಚಾಯತ್ ಗಳು ಸರಕಾರದಂತೆ ಕೆಲಸ ಮಾಡಬೇಕು. ಸದಸ್ಯರ ಗೌರವ ಧನವನ್ನು 2 ಸಾವಿರ ರೂ.ಗೆ ಏರಿಸಬೇಕು ಎಂದು ಈಶ್ವರಪ್ಪನವರಲ್ಲಿ ವಿನಂತಿಸಿದರು.

ಪಂ.ಗಳ ಅಭಿವೃದ್ಧಿಯ ವಿಚಾರದಲ್ಲಿ ಈಶ್ವರಪ್ಪನವರು ಎತ್ತಿದ ಕೈ. ರಾಜ್ಯದಲ್ಲಿ ನಾನು ನೋಡಿದ ಪೈಕಿ ಅತ್ಯಂತ ಬುದ್ಧಿವಂತ ರಾಜಕಾರಣಿ ಎಂದರೆ ಅದು ಹರೀಶ ಪೂಂಜ. ಇದಕ್ಕೆ ಎರಡು ಮಾತಿಲ್ಲ ಎಂದರು.

ಅನ್ಯಾಯದ ವಿರುದ್ಧ ತಾಂಟಲು ನಾವು ಸಿದ್ಧ: ಶಾಸಕ ಪೂಂಜ

ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಅಭಿವೃದ್ಥಿಗೆ ಅತೀ ಹೆಚ್ಚಿನ ಅನುದಾನ ನೀಡಲು ಸಹಕರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಎಂದಾಗ ಕ್ರೀಡಾಂಗಣದಲ್ಲಿ ಬೃಹತ್ ಸಭಯಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಸಚಿವರಿಗೆ ಗೌರವ ನೀಡಿದರು.

ಇನ್ನೂ ತಾಲೂಕಿನ ಹಲವು ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಸಚಿವ ಅಂಗಾರರು ಪಂಜರ ಮೀನುಗಾರಿಕೆಗೆ ತಾಲೂಕಿಗೆ ಅನುದಾನ ನೀಡಿದರೆ ಸಾವಿರ ಉದ್ಯೋಗ ಸೃಷ್ಟಿಸಲು ಸಾಧ್ಯ ಎಂದರು. ನೀವು ಅನ್ಯಾಯದ ಮಾರ್ಗ ಹಿಡಿದರೆ ನಾವು ನಿಮಗೆ ತಾಂಟುವುದೇ. ಪ್ರಾಣವನ್ನು ಪಣವಿಟ್ಟು ಭಯೋತ್ಪಾದನೆ, ಲವ್ ಜಿಹಾದ್, ಗೋ‌ ಹತ್ಯೆ, ದೇಶದ್ರೋಹಿ, ನಡವಳಿಕೆಗಳ ವಿರುದ್ಧ ಕೊನೆಯ ಉಸಿರು ಇರುವವರೆಗೆ ಹೋರಾಡಲು‌ ನಾವು ಸದಾ ಸಿದ್ಧ ಎಂದು ತಾಂಟ್ರೇ ಬಾ ತಾಂಟ್ ಹೇಳಿಕೆ ನೀಡಿದ್ದ ರಿಯಾಜ್ ಫರಂಗಿಪೇಟೆ ಹೇಳಿಕೆಗೆ ಖಡಕ್ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲರೂ ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುವ ಮೂಲಕ ಶಾಸಕರ ಮಾತಿಗೆ ಬೆಂಬಲ ಸೂಚಿಸಿದರು.  ವೇದಿಕೆಯಲ್ಲಿ ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ‌ಪಂಜ, ಕಿಯೋನಿಕ್ಸ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಭಾಗ ಸಹ ಪ್ರಭಾರಿ ರಾಜೇಶ್, ಜಿಲ್ಲಾ ಪ್ರಭಾರಿ ಭರತೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಸುಧೀರ ಶೆಟ್ಟಿ, ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ, ಪ.ಪಂ.ಅಧ್ಯಕ್ಷೆ ರಜನಿ‌ ಕುಡ್ವ, ಉಪಾಧ್ಯಕ್ಷೆ ಜಯಾನಂದ ಗೌಡ, ಜಿ.ಪಂ. ಹಾಗೂ ತಾ.ಪಂ.ಸದಸ್ಯರುಗಳು. ಶಕ್ತಿ‌ ಕೇಂದ್ರದ ಅಧ್ಯಕ್ಷರುಗಳು ಇದ್ದರು.

ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿದರು. ಶಾಸಕ ಹರೀಶ ಪೂಂಜಾ ಪ್ರಸ್ತಾವಿಸಿದರು. ಮಂಡಲ ಕಾರ್ಯದರ್ಶಿ ಬಿ.ಎಸ್.ಸೀತಾರಾಮ ವಂದಿಸಿದರು. ಶ್ರೀನಿವಾಸ ಧರ್ಮಸ್ಥಳ ನಿರ್ವಹಿಸಿದರು.

 

ಅಭೂತ ಪೂರ್ವ ಮೆರವಣಿಗೆ:

ಸಭೆಯ ಮೊದಲು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನ ದ ವಠಾರದಿಂದ ಕ್ರೀಡಾಂಗಣದ ವರೆಗೆ ಬೃಹತ್ ಮೆರವಣಿಗೆ ನಡಯಿತು. ಕೇರಳ ಚೆಂಡೆ, ವಾದ್ಯ, ಭಜನಾ ತಂಡ, ಸ್ತಬ್ದ ಚಿತ್ರಗಳು, ನಾಯಕರ ಭಾವಚಿತ್ರ, ನಾಸಿಕ್ ಬ್ಯಾಂಡ್, ಭಾರತಾಂಭೆಯ ಭಾವಚಿತ್ರ, ನಗರಲಂಕಾರಕ್ಕೆ ಬಳಸಿದ ಬಟ್ಟೆಯ ಬಂಟಿಂಗ್ಸ್ ಆಕರ್ಷಣೀಯವಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿಯಿಂದ ವಾಹನ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಬಿಳಿ ಪಂಚೆ ಬಿಳಿ ಅಂಗಿ ಶಾಲು ಪೇಟಾ ಧರಿಸಿ ವಿಜೇತ ಪುರುಷರು ಹಾಗೂ ಸೀರೆ ಪೇಟಾ ಕೇಸರಿ ಶಾಲು ಧರಿಸಿ ಮಹಿಳಾ ವಿಜೇತರು ಮೆರವಣಿಗೆಗೆ ಮೆರುಗು ನೀಡಿದರು.

ಯುವ ಮೊರ್ಚಾದ ಶಿಸ್ತುಬದ್ದ ಕಾರ್ಯಕ್ಕೆ ಮೆಚ್ಚುಗೆ. ಅಂಬುಲೆನ್ಸ್ ಸಾಗಲು ತಕ್ಷಣ ಸ್ಪಂದಿಸಿದ ಸ್ವಯಂಸೇವಕರು.

ಅಭಿನಂದನಾ ಸಭೆಗೆ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ಬಂದಂತಹ ಅಂಬುಲೆನ್ಸ್ ಗೆ ತಕ್ಷಣ ಸುಗಮವಾಗಿ ಸಾಗಲು ದಾರಿ ಮಾಡಿಕೊಟ್ಟದ್ದಲ್ಲದೆ ಬಂದಂತವರಿಗೆ ಯಾವುದೇ ತೊಂದರೆ ಆಗದಂತೆ ತಾಲೂಕು ಯುವ ಮೊರ್ಚಾದ ಸ್ವಯಂ ಸೇವಕರು ತೊಡಗಿಸಿಕೊಂಡದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಎಲ್ಲರಿಗೂ ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್, ಯಾರಿಗೂ ಎಲ್ಲೂ ಲೋಪವಾಗದಂತೆ ಕೇಸರಿ ಶಾಲು ಹಾಕಿದ ಯುವ ಪಡೆಯ ದಂಡು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

error: Content is protected !!