ಬೆಳ್ತಂಗಡಿ: ಎಳನೀರು, ಬಂಗಾರ ಪಲ್ಕೆ ಬಳಿ ಆರು ದಿನಗಳ ಹಿಂದೆ ಜಲಪಾತ ವೀಕ್ಷಣೆ ವೇಳೆ ಗುಡ್ಡ ಕುಸಿತಗೊಂಡು, ವಿದ್ಯಾರ್ಥಿ ಕಣ್ಮರೆಯಾದ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು.
ಸತತ ಕಾರ್ಯಾಚರಣೆ ನಡೆಸಿದರೂ ವಿದ್ಯಾರ್ಥಿಯ ದೇಹ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಎಸ್.ಡಿ.ಆರ್.ಎಫ್. ಹಾಗೂ ಕೆಲವು ಸಂಘಟನೆಗಳ ಸದಸ್ಯರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಕಲ್ಲು ಮಿಶ್ರಿತ ಮಣ್ಣು ತೆಗೆಯುವ ಕೆಲಸ ಮಾಡಿದರೂ ದೇಹದ ಕುರುಹು ಪತ್ತೆಯಾಗುತ್ತಿಲ್ಲ. ಕಾರ್ಯಚರಣೆಗೆ ಅಡ್ಡಿಯಾಗುತ್ತಿರುವ ಬಂಡೆಗಳನ್ನು ಕಂಪ್ರೆಸರ್ ಮೂಲಕ ತೆಗೆಯುವ ಕೆಲಸ ಆಗುತ್ತಿದ್ದರೂ, ಕೆಲವೊಂದು ತೊಂದರೆಗಳಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ಶೋಧ ಕಾರ್ಯದ ಮಾಹಿತಿಯನ್ನು ಪಡೆಯಲು ದ.ಕ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಲಕ್ಷ್ಮೀ ಪ್ರಸಾದ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಬೆಳ್ತಂಗಡಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಕಾರ್ಯಚರಣೆಯ ಸಂಪೂರ್ಣ ಮಾಹಿತಿಯನ್ನು ಎಸ್. ಪಿ. ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಉಪಸ್ಥಿತರಿದ್ದರು.