ಬೆಳ್ತಂಗಡಿ: ಅಳದಂಗಡಿಯ ಬೆಟ್ಟದ ಬಸದಿಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಪಂಚಕಲ್ಯಾಣ ಮತ್ತು ಬ್ರಹ್ಮಯಕ್ಷ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಫೆ. 13 ರಿಂದ 17ರ ವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ. ತೀರ್ಥಂಕರರ ಜೀವನದ ವಿವಿಧ ಹಂತಗಳಾದ ಗರ್ಭಾವತರಣ (ಗರ್ಭ ಕಲ್ಯಾಣ) ಜನನ (ಜನ್ಮ ಕಲ್ಯಾಣ), ದೀಕಾ ಕಲ್ಯಾಣ ಕೇವಲಜ್ಞಾನ ಪ್ರಾಪ್ತಿ (ಕೇವಲಜ್ಞಾನ ಕಲ್ಯಾಣ) ಮತ್ತು ಮೋಕ್ಷ ಪ್ರಾಪ್ತಿ (ಮೋಕ್ಷ ಕಲ್ಯಾಣ) ಯನ್ನು ಪಂಚಕಲ್ಯಾಣವಾಗಿ ನಡೆಸುವುದು ಸಂಪ್ರದಾಯವಾಗಿದೆ.
ಕಾರ್ಕಳದ ಪೂಜ್ಯ ಲಲಿತಕೀರ್ತಿ ಭಟ್ಟಾರಕರು, ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕರು ಮತ್ತು ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಪಂಚಕಲ್ಯಾಣ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ. ವೀರೇಂದ್ರ ಹೆಗ್ಗಡೆಯವರು, ಅಳದಂಗಡಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಎಂ.ಎನ್. ರಾಜೇಂದ್ರ ಕುಮಾರ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.