ಶಿವಮೊಗ್ಗ: ಜಿಲ್ಲೆಯಾದ್ಯಂತ ಭೂಮಿ ಕಂಪನದ ಸುದ್ದಿ ಹೊರಬಿದ್ದಿರುವ ಬೆನ್ನಲ್ಲೇ ತಾಲೂಕಿನ ಹುಣಸೋಡು ಬಳಿಯ ಕಲ್ಲು ಕ್ವಾರಿಯಲ್ಲಿ ಸ್ಪೋಟಕ ವಸ್ತು(ಡೈನಾಮೈಟ್) ತುಂಬಿದ ಲಾರಿ ಸ್ಫೋಟಗೊಂಡು ಸುಮಾರು 8 ಮಂದಿ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ.
ನಿನ್ನೆ ರಾತ್ರಿ ಜಿಲೆಟಿನ್ ಕಡ್ಡಿ ತುಂಬಿದ ಲಾರಿ ಶಿವಮೊಗ್ಗ ಕಡೆಯಿಂದ ಹುಣಸೋಡು ಕಲ್ಲಿನ ಕ್ವಾರಿ ಕಡೆ ಬಂದಿದೆ. ಲಾರಿಯ ಹಿಂಬದಿಯಲ್ಲೂ ವಾಹನವೊಂದು ಇದ್ದು , ಇದೇ ವೇಳೆ ಸ್ಫೋಟವಾಗಿದೆ. ಇದರ ತೀವ್ರತೆಗೆ ಲಾರಿ, ಸಂಪೂರ್ಣವಾಗಿ ಛಿದ್ರಛಿದ್ರವಾಗಿವೆ. ಲಾರಿಯಲ್ಲಿದ್ದ ಚಾಲಕ, ಕ್ಲಿನರ್, ಹಾಗೂ ಲಾರಿಯ ಹಿಂಬದಿ ವಾಹನದಲ್ಲಿದ್ದ ಕೆಲವರು ಸಾವನ್ನಪ್ಪಿದ್ದು, ಅವರ ಮೃತದೇಹ ಸಂಪೂರ್ಣವಾಗಿ ಛಿದ್ರಗೊಂಡಿವೆ.ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹಗಳು ಛಿದ್ರ ಛಿದ್ರ ವಾಗಿವೆ. ಘಟನಾ ಸ್ಥಳಕ್ಕೆ ಎಸ್‍ಪಿ ಕೆ.ಎಂ.ಶಾಂತರಾಜು, ಡಿಸಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದಾರೆ. ,ಸುಮಾರು ಎರಡು ಕೀ.ಮಿ ದೂರದವರೆಗೂ ದೊಡ್ಡ ಶಬ್ದ ಕೇಳಿದ್ದು ಸುತ್ತಮುತ್ತ ಧೂಳು ಆವರಿಸಿದೆ, ಸ್ಫೋಟದ ತೀವ್ರತೆಗೆ ವಿದ್ಯುತ್ ಸ್ಥಗಿತವಾಗಿದ್ದಲ್ಲದೆ ಸಮೀಪದ ಮನೆಗಳ ಕಿಟಕಿ ಗ್ಲಾಸ್ ಒಡೆದು ಬಿದ್ದಿವೆ.
ಸಾವನ್ನಪ್ಪಿರುವವರು ಬಿಹಾರ ಮೂಲದ ಕಾರ್ಮಿಕರಾಗಿದ್ದು . ಈಗಾಗಲೇ ಕೆಲವು ಮೃತದೇಹ ಹೊರತೆಗೆಯಲಾಗಿದ್ದು, ರಾತ್ರಿಯಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಇಂದು ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯ ಮುಂದುವರೆಯಲಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತುಂಬಿದ್ಧ ಡೈನಾಮೈಟ್ ಬಾಕ್ಸ್ ಗಳು ಸ್ಪೋಟಗೊಂಡು ಈ ಅನಾಹುತ ಸಂಭವಿಸಿದೆ.ಸ್ಫೋಟದ ಭೀಕರತೆ ಹೆಚ್ಚಾಗಿರುವ ಕಾರಣ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರ ಜತೆಗೆ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದೂ ತಿಳಿದು ಬಂದಿದೆ.