ಅಳದಂಗಡಿ ಸೀಮೆ ಪ್ರಧಾನ ದೈವಗಳಿಗೆ ಧರ್ಮನೇಮ: ಧರ್ಮ ಚಾವಡಿಯ ಮುಂಭಾಗ ತಲೆಮಾರಿಗೊಮ್ಮೆ ನಡೆಯುವ ಕೊಡಮಣಿತ್ತಾಯ, ಮೂಜಿಲ್ನಾಯ ದೈವದ ನೇಮ

ಬೆಳ್ತಂಗಡಿ: ಅಜಿಲ ವಂಶಸ್ಥರ ಅಳದಂಗಡಿ ಅರಮನೆಯಲ್ಲಿ ಮಂಗಳವಾರ ರಾತ್ರಿ, ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ಪಟ್ಟಾಭಿಷೇಕ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಅಳದಂಗಡಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮ ಸಂಪ್ರದಾಯಬದ್ಧವಾಗಿ ಸಂಪನ್ನಗೊಂಡಿತು. ನೇಮವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.

ಅರಮನೆಯ ಧರ್ಮ ಚಾವಡಿಯ ಮುಂಭಾಗದಲ್ಲಿ ನಡೆದ ಕೊಡಮಣಿತ್ತಾಯ ಮತ್ತು ಮೂಜಿಲ್ನಾಯ ದೈವದ ನೇಮದಲ್ಲಿ ಅಜಿಲರ ಕುಟುಂಬಿಕರು ಭಾಗಿಗಳಾಗಿದ್ದರು.

ತಲೆಮಾರಿಗೊಮ್ಮೆ ನಡೆಯುವ ಧರ್ಮನೇಮಕ್ಕೆ‌ಪೂರ್ವಭಾವಿಯಾಗಿ ಬೆಳಿಗ್ಗೆ ತೋರಣ ಮುಹೂರ್ತ ನಡೆದರೆ, ಸಂಜೆ ನಾವರ ಮಾಗಣೆ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರವನ್ನು ಹಾಗು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಮೂಜಿಲ್ನಾಯ ದೈವದ ಭಂಡಾರವನ್ನು ತರಲಾಯಿತು. ಸೀಮೆ ವ್ಯಾಪ್ತಿ, ಹೊರಗಿನಿಂದ ಸ್ತ್ರೀಪುರುಷರು, ಮಕ್ಕಳಾದಿಯಾಗಿ ಸಹಸ್ರಾರು ಮಂದಿ ನೇಮವನ್ನು ವೀಕ್ಷಿಸಲು ಸೇರಿದ್ದರು. ಸೂಕ್ತ ವೀಕ್ಷಣೆಗಾಗಿ ಅಟ್ಟಳಿಗೆಗಳನ್ನು ನಿರ್ಮಿಸಲಾಗಿತ್ತಲ್ಲದೆ ಅಲ್ಲಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಕಣ್ಮನ ಸೆಳೆಯುವ ವಿದ್ಯದೀಪಾಲಂಕಾರ, ಆಕರ್ಷಕ ಕಮಾನುಗಳನ್ನು, ಹೂವಿನ ಶೃಂಗಾರವನ್ನು ಮಾಡಲಾಗಿತ್ತು. ಐದು ದೈವಗಳ ನೇಮ ಬೆಳಗ್ಗೆ ಆರು ಗಂಟೆಯವರಿಗೆ ಮುಂದುವರಿಯಿತು. ಅತ್ಯಂತ ಶಿಸ್ತು ಬದ್ಧವಾಗಿ ನಡೆದ ಕಾರ್ಯಕ್ರಮದಲ್ಲಿ ಬಂದವರೆಲ್ಲರಿಗೂ ಉಪಾಹಾರ- ಆತಿಥ್ಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದ ಸಂಪೂರ್ಣ ನೇತೃತ್ವ ವಹಿಸಿದ್ದ, ರಜತ ಮಹೋತ್ಸವ ಸಮಿತಿ ಸಂಚಾಲಕ ಶಿವಪ್ರಸಾದ ಅಜಿಲರು ಸ್ವಾಗತಿಸಿದರು.

ಡಿ.1 ರಂದು ಡಾ.ಪದ್ಮಪಸಾದ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆ ಅತ್ಯಂತ ವೈಭವೋಪೇತವಾಗಿ ನಡೆದಿತ್ತು. ಅದರ ಅಂಗವಾಗಿ ಮಂಗಳವಾರ ಧರ್ಮನೇಮ ಹಮ್ಮಿಕೊಳ್ಳಲಾಗಿತ್ತು.

ಮೂಡಬಿದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಸಾಂಸದ ನಳೀನ ಕುಮಾರ್ ಕಟೀಲು, ಶಾಸಕ ಹರೀಶ ಪೂಂಜ, ಮಾಜಿ ಶಾಸಕರಾದ ವಸಂತ ಬಂಗೇರ, ವಿನಯಕುಮಾರ ಸೊರಕೆ, ಜಗದೀಶ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದು ನೇಮವನ್ನು ವೀಕ್ಷಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಲಡ್ಕ ಡಾ. ಪ್ರಭಾಕರ ಭಟ್, ಬೆಳ್ತಂಗಡಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಮತ್ತಿತರರು ಭೇಟಿ ನೀಡಿದರು.

error: Content is protected !!