ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೀಲಾವತಿ ಕೆ.(52) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದು, ದುಖಃತಪ್ತ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು, ಊರವರು, ಸಂಭಂಧಿಕರು, ಹಳೆವಿದ್ಯಾರ್ಥಿಗಳು ಬಿಕ್ಕಿ, ಬಿಕ್ಕಿ ಅಳುತ್ತಿದ್ದ ದೃಶ್ಯ ಕಂಡುಬಂತು.
ಲೀಲಾವತಿ ಕೆ. ಅವರು ಕಳೆದ 23 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 1997ರಲ್ಲಿ ಕುಪ್ಪೆಟ್ಟಿ ಸರಕಾರಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಅಲ್ಲಿ 15 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಪಿಲಿಗೂಡು ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಿಲಿಗೂಡು ಶಾಲೆ 2013ರಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದಿದ್ದು, 2015ರಲ್ಲಿ ಹೈಯರ್ ಗ್ರೇಡ್ ಪದೋನ್ನತಿ ಪಡೆಯಲು ಇವರ ಕೊಡುಗೆ ಪ್ರಮುಖವಾಗಿತ್ತು.
ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದು, ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.
ಶಾಲೆಯ ಇತರ ಶಿಕ್ಷಕರು, ಊರ ದಾನಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಜತೆ ದುಡಿದು ಶಿಕ್ಷಕಿ ಲೀಲಾವತಿ ಅವರು ಪಿಲಿಗೂಡು ಶಾಲಾಭಿವೃದ್ಧಿಗೆ ವಿಶೇಷ ಸೇವೆ ನೀಡಿದ್ದಾರೆ. ಈ ಸೇವೆಯನ್ನು ಪರಿಗಣಿಸಿ 2019ರಲ್ಲಿ ಪ್ರಾಥಮಿಕ ಶಾಲಾ ವಿಭಾಗ (ಕಿರಿಯ)ದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೂ ಭಾಜನರಾಗಿದ್ದರು.
ಕರ್ತವ್ಯವನ್ನು ಹೆಚ್ಚು ಪ್ರೀತಿಸಿ ಶಾಲೆಯನ್ನು ದೇವಾಲಯದ ರೀತಿಯಲ್ಲಿ ಗೌರವಿಸಿದ್ದರು. ವಿದ್ಯಾರ್ಥಿಗಳ ಹುಟ್ಟುಹಬ್ಬ ದಿನ ಶಾಲೆಯಲ್ಲಿ ಗಿಡ ನೆಡುವ ಸಂಪ್ರದಾಯವನ್ನೂ ಆರಂಭಿಸಿದ್ದರು. ಶಾಲೆ ಆವರಣದಲ್ಲಿ ಗದ್ದೆ ನಿರ್ಮಿಸಿ, ಅಕ್ಷರ ಕೈತೋಟದಲ್ಲಿ ಗಿಡಗಳ ಆರೈಕೆ, ತರಕಾರಿ ಬೆಳೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕೃಷಿಯ ಅಭಿರುಚಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದರು. ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೂ ಪ್ರೋತ್ಸಾಹ ನೀಡುತ್ತಿದ್ದರು. ಅವರ ನಿಧನದಿಂದ ಶಾಲೆಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಪೋಷಕರು, ಊರಿನವರು ಬೇಸರ ವ್ಯಕ್ತಪಡಿಸುತ್ತಿದ್ದರು.
ಪಿಲಿಗೂಡು ಶಾಲೆ ಆವರಣದಲ್ಲಿರುವ ಸಭಾಮಂಟಪದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸಹಶಿಕ್ಷಕರು, ಹಳೆವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳ ರೋದನೆ ಮುಗಿಲುಮುಟ್ಟುವಂತಿತ್ತು. ಶಿಕ್ಷಣಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಪಿಲಿಗೂಡು, ಕಣಿಯೂರು, ಹಲೇಜಿ, ಕುಪ್ಪೆಟ್ಟಿ, ಗೋವಿಂದೂರು ಪ್ರದೇಶಗಳ ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಮೃತರ ನಿವಾಸದ ಬಳಿ ಅಂತ್ಯಕ್ರಿಯೆ ನೆರವೇರಿದ್ದು, ಮನೆಯ ಬಳಿಯೂ ಅಂತಿಮ ದರ್ಶನ ಪಡೆಯಲು ನೂರಾರು ಮಂದಿ ನೆರೆದಿದ್ದರು.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನ ಶೈಲೇಶ್ ಕುಮಾರ್, ಅಭಿನಂದನ್ ಹರೀಶ್ ಹಾಗೂ ವಿವಿಧ ಪಕ್ಷಗಳ ಮುಖಂಡರು ಅಂತಿಮ ದರ್ಶನ ಪಡೆದರು.
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಳೆವಿದ್ಯಾರ್ಥಿಗಳು, ಊರ ಪರವೂರ ವಿದ್ಯಾಭಿಮಾನಿಗಳು, ಹಿರಿಯರು ಶಿಕ್ಷಣ ಇಲಾಖೆ ಸಿಬ್ಬಂದಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮೃತರು ಪತಿ ಹಾಗೂ ಮೂವರು ಪುತ್ರರಾದ ಚೇತನ್, ಚರಣ್, ಚೈತನ್ಯ, ಬಂಧು ವರ್ಗ, ಶಿಶ್ಯವರ್ಗವನ್ನು ಅಗಲಿದ್ದಾರೆ.