ಧರ್ಮಸ್ಥಳ: ಕಾರ್ತಿಕ ಮಾಸ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷವಾಗಿದ್ದು, ಮಾಸದ ಕೊನೆಯ ಐದು ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಉತ್ಸವಗಳು ವೈಭವದಿಂದ ಜರುಗುತ್ತವೆ. ಗುರುವಾರ ಹೊಸಕಟ್ಟೆ ಉತ್ಸವ ನೆರವೇರಿತು.
ಶುಕ್ರವಾರ ಕೆರೆಕಟ್ಟೆ ಉತ್ಸವ, ಶನಿವಾರ ಲಲಿತೋದ್ಯಾನ ಉತ್ಸವ ಮರುನವೀಕರಣಗೊಂಡ ನೂತನ ಉದ್ಯಾನವನದಲ್ಲಿ ನಡೆಯಲಿದೆ. ಭಾನುವಾರ ಕಂಚಿ ಮಾರುಕಟ್ಟೆ ಉತ್ಸವ, ಸೋಮವಾರ ಬೆಳ್ಳಿ ರಥದಲ್ಲಿ ಮುಖ್ಯಧ್ವಾರದವರೆಗೆ ಶ್ರೀ ಸ್ವಾಮಿಯ ಭವ್ಯ ಮೆರವಣಿಗೆ ಸಾಗಿ ಗೌರೀ ಮಾರುಕಟ್ಟೆ ಉತ್ಸವ ಅದ್ದೂರಿಯಾಗಿ ನೆರವೇರುತ್ತದೆ.
ಉತ್ಸವದ ದಿನಗಳಲ್ಲಿ ಭಕ್ತರು, ಪಂಜು, ವಾದ್ಯಗಳು, ಬಿರುದಾವಳಿಗಳ ಜೊತೆಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆದು, ನಿಗದಿತ ಕಟ್ಟೆಯಲ್ಲಿ ಉತ್ಸವ ನಡೆಯುತ್ತದೆ. ಉತ್ಸವದ ಸಂದರ್ಭ ಅಷ್ಟವಿಧಾನ ಸೇವೆ ನಡೆಯುತ್ತದೆ, ಬಳಿಕ ದೇವಾಲಯ ಬಳಿಗೆ ಬಂದು ಬೆಳ್ಳಿ ರಥದಲ್ಲಿ ದೇವಾಲಯಕ್ಕೆ ಪ್ರದಕ್ಷಿಣೆ ಬದಲಾಗುತ್ತದೆ. ದೇವರ ಮೂರ್ತಿಗೆ ಮಂಗಳಾರತಿ ಮಾಡಿ ದೇಗುಲದೊಳಕ್ಕೆ ಕೊಂಡೊಯ್ಯುವುದರೊಂದಿಗೆ ಆ ದಿನದ ಉತ್ಸವ ಕೊನೆಗೊಳ್ಳುತ್ತದೆ. ವರ್ಷಪೂರ್ತಿ ದೇವಾಲಯದೊಳಗೆ ಸ್ವಾಮಿಯ ದರ್ಶನ ಲಭಿಸಿದರೆ, ಈ ವಿಶೇಷ ಉತ್ಸವ ನಡೆಯುವ ಐದು ದಿನ ಶ್ರೀ ಮಂಜುನಾಥ ಸ್ವಾಮಿಯೇ ದೇಗುಲದಿಂದ ಹೊರಗೆ ಬಂದು ವಿಹಾರದ ಮೂಲಕ ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ಪ್ರತೀತಿ ಇದೆ.