‘ಪರ ಹಿತ ಬಯಸೋ ಮನದ ಒಳಗೆ, ದೇವರ ಇರುವು ಕಾಣೆಯಾ’: ಭಾವೈಕ್ಯತೆಯ ಸಂದೇಶ ಸಾರುವ ‘ಗೀತ ಕಥನ ಚಿತ್ರ’: ‘ಜೊತೆ ಜೊತೆಯಲಿ’ ಖ್ಯಾತಿಯ ನಿನಾದ ನಾಯಕ್ ಗಾಯನ

ಬೆಳ್ತಂಗಡಿ: ‘ಪರ ಹಿತ ಬಯಸೋ ಮನದ ಒಳಗೆ, ದೇವರ ಇರುವು ಕಾಣೆಯಾ’ ಪರಹಿತದೊಳಗೆ ಎಂಬ ಸರ್ವ ಧರ್ಮಗಳ ಸಾರ, ಮಾನವೀಯತೆಯ ಪ್ರತಿಬಿಂಬವನ್ನು ಅಕ್ಷರ, ಸಂಗೀತ ಹಾಗೂ ಕಥನ ರೂಪದಲ್ಲಿ ಪ್ರಸ್ತುತ ಜಗತ್ತಿಗೆ ಅಗತ್ಯವಿರುವಂತೆ ತಿಳಿಸುವ ಪ್ರಯತ್ನವೇ ಎಸ್.ಡಿ.ಎಂ. ತಂಡದ ‘ಗೀತ ಕಥನ ಚಿತ್ರ’.


‘ಗೀತ ಕಥನ ಚಿತ್ರ’ ಹೌದು, ಜನರ ಮನಮುಟ್ಟುವಂತಹಾ ಸಾಹಿತ್ಯ, ಅದರೊಳಗೊಂದು ಅರ್ಥಗರ್ಭಿತ ಸಂದೇಶ. ಹಿನ್ನೆಲೆ ಸಂಗೀತ, ಮಧುರ ಗಾಯನ, ಇದನ್ನು ಅದ್ಭುತವಾಗಿ ಬಿಂಬಿಸುವ ದೃಶ್ಯ ಕಥನ, ಹಿಂದಿನ ಖ್ಯಾತ ಸಂತರು ಸಾರಿದ ಭಾವೈಕ್ಯತೆಯ ಸಂದೇಶವನ್ನು ಇಂದಿನ ಜಗತ್ತಿಗೆ ತಕ್ಕಂತೆ ತಿಳಿಸುವ ಕನ್ನಡ ರೂಪಾಂತರ ಕವಿತೆ. ತಂತ್ರಜ್ಞಾನದ ಸಹಕಾರದೊಂದಿಗೆ ಈ ಸಂದೇಶವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ವಿನೂತನ ಪ್ರಯತ್ನ ಇದಾಗಿದೆ. ಸಂತರು, ಬಸವಣ್ಣ, ಗಾಂಧೀಜಿ ಮುಂತಾದವರು ತಿಳಿಸಿದಂತೆ ಜಾತಿ ಧರ್ಮವನ್ನು ಮೀರಿ ದೇವರನ್ನು ಕಾಣುವ ಅದ್ಭುತ ಪರಿಕಲ್ಪನೆಯ ಗೀತೆಯನ್ನು ಎಸ್.ಡಿ.ಎಂ. ಕಾಲೇಜಿನ ತಂಡ ಪ್ರಸ್ತುಪಡಿಸಿದೆ.
ಮಹಾತ್ಮಾ ಗಾಂಧೀಜಿ ಅವರ ಮೆಚ್ಚಿನ ‘ವೈಷ್ಣವ ಜನತೋ ತೇನೇ ಕಹಿಯೇ ಜೆ ಪೀಡ್ ಪರಾಯೀ ಜಾನೇ ರೆ’ ಹಾಡನ್ನು ಗಾಂಧಿ ಜಯಂತಿಯಂದು ಅಥವಾ ವಿಶೇಷ ಸಂದರ್ಭಗಳಲ್ಲಿ ಆಲಿಸುವಂತಾಗಿತ್ತು. 15ನೇ ಶತಮಾನದ ಸಂದರ್ಭ ಸಂತ ಕವಿ ನಾರ್ಸಿ ಮೆಹ್ತಾ ರಚಿಸಿದ್ದ ಈ ಗುಜರಾತಿ ಭಾಷೆಯ ಹಾಡನ್ನು ಕನ್ನಡಕ್ಕೆ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕವನ ರಚಿಸುವ ಜೊತೆಗೆ ಪೀಠಿಕೆ ಮೂಲಕ ಹಾಡನ್ನು ಪ್ರಸ್ತುತ ಹಾಗೂ ಮ್ಯೂಸಿಕ್ ಆಲ್ಬಂ ರಚಿಸಲಾಗಿದೆ.

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ ಅವರು ಪ್ರಸ್ತುತ ಸಮಾಜದಲ್ಲಿ ಉದ್ಭವಿಸುತ್ತಿರುವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಕವನ ರಚನೆ ಮಾಡಿದ್ದಾರೆ. ಕವನದ ಸಾಲುಗಳು ಇಂತಿವೆ,
ಶೀರ್ಷಿಕೆ: ಪರಹಿತ ಬಯಸೋ

ಪರಹಿತ ಬಯಸೋ ಮನದ ಒಳಗೆ
ದೇವರ ಇರುವು ಕಾಣೆಯಾ
ಜೀವ ಜೀವದ ನೋವ ನೀಗಿಸೋ
ಪರಮಾತ್ಮನ ನೆಲೆ ಕಾಣೆಯಾ
ಸಕಲ ಮಿತಿಗಳ ಮೀರುತ ನಿಂತ
ಸಂತ ಜ್ಯೋತಿಯಾ ಕಾಣೆಯಾ
ನಡೆನುಡಿಗಳಲಿ ಅರಿವಿನ ಹಣತೆ
ಹಚ್ಚಿದ ಪ್ರಭೆಯಾ ಕಾಣೆಯಾ
ಸಮತೆಯ ಭಾವದ ಬೆಳಕಿನ ನಡುವೆ
ಕಂಗೊಳಿಸುವ ಕಣ ಕಾಣೆಯಾ
ಮಮತೆಯ ಕಣ್ಣಲಿ ಎಲ್ಲರ ನೋಡುವ
ಮಾತೃತ್ವದ ಗಣಿ ಕಾಣೆಯಾ
ಭೂಮಿ ತೂಕದ ಸಹನೆಯ ಜೊತೆಗೆ
ಜೀವಿಸೋ ಆತ್ಮ ಕಾಣೆಯಾ
ಮೋಹಮಾಯೆಗಳ ಹಿಡಿತಕೆ ಸಿಲುಕದ
ದಿವ್ಯಸೊಗಸನು ಕಾಣೆಯಾ

ಭೂಮಿ ತೂಕದ ಸಹನೆಯ ಜೊತೆಗೆ ಜೀವಿಸೋ ಆತ್ಮ ಕಾಣೆಯಾ, ಮೋಹಮಾಯೆಗಳ ಹಿಡಿತಕೆ ಸಿಲುಕದ ದಿವ್ಯಸೊಗಸನು ಕಾಣೆಯಾ ಹೀಗೆ ಕೆಲ ತೂಕದ ಸಾಲುಗಳನ್ನು ಜೋಡಿಸಿ, ಆಳವಾದ ಅರ್ಥ ನೀಡುವ ಅಕ್ಷರಗಳ ಪೋಣಿಸಿ ಕವನ ರಚಿಸಲಾಗಿದೆ. ಇಂದಿನ ರಾಜಕೀಯ ಮೇಲಾಟಗಳು, ಅವುಗಳಿಗಾಗಿ ಧರ್ಮ, ಜಾತಿಯ ಬಳಕೆ. ಮನುಷ್ಯ- ಮನುಷ್ಯನ ಜೊತೆಗೆ ಗುದ್ದಾಟಗಳು, ಆಸ್ತಿ- ಅಂತಸ್ತಿಗಾಗಿ ಹೊಡೆದಾಟಗಳು, ಅಧಿಕಾರಕ್ಕಾಗಿ ಮೇಲಾಟಗಳು, ಈ ಎಲ್ಲಾ ಹೈಡ್ರಾಮಗಳ ನಡುವೆ ಈ ಕವನ ಪ್ರಸ್ತುತವನಿಸುತ್ತದೆ. ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಸಣ್ಣ ಸಣ್ಣ ಸಹಾಯಗಳೂ ನಮ್ಮ ಅಕ್ಕಪಕ್ಕದಲ್ಲಿರುವವರಿಗೆ ಯಾವ ರೀತಿ ಸಹಾಯಕವಾಗುತ್ತದೆ ಹಾಗೂ ಅವರ ಮುಖದಲ್ಲಿ ಯಾವ ರೀತಿ ಮಂದಹಾಸ ಮೂಡಿಸುತ್ತದೆ ಎಂಬ ವಿಚಾರಗಳನ್ನೂ ಸರಳವಾಗಿ ಚಿತ್ರಿಸಲಾಗಿದೆ.


ಡಾ. ಎನ್. ಕೆ. ಪದ್ಮನಾಭ ಅವರು ತಿಳಿಸುವಂತೆ “ಖ್ಯಾತ ಸಂತ ಕವಿ ನಾರ್ಸಿ ಮೆಹ್ತಾ ಅವರು ರಚಿಸಿದ್ದ ಗೀತೆ ಅಂದು, ಇಂದು, ಮುಂದೆಯೂ ಪ್ರಸ್ತುತವಾದದ್ದು. ಈ ಹಾಡನ್ನು ಕೇಳಿ ಮಹಾತ್ಮಾ ಗಾಂಧೀಜಿಯವರಿಗೇ ಇಷ್ಟವಾಗಿತ್ತು. ಶಾಲೆ, ಕಾಲೇಜುಗಳಲ್ಲಿ ಓದುತ್ತಿದ್ದ ಸಂದರ್ಭಗಳಲ್ಲೂ ಈ ಹಾಡಿನ ಸಾಲುಗಳನ್ನು ಕೇಳುತ್ತಿದ್ದ ಸಂದರ್ಭ ಎಷ್ಟು ಅರ್ಥಗರ್ಭಿತ ಸಾಲುಗಳು ಎಂಬ ಚಿಂತನೆ ಹರಿದಾಡುತ್ತಿತ್ತು. 2019ರಲ್ಲಿ ನಮ್ಮ ಕಾಲೇಜಿನ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಗಾಂಧಿ ಜಯಂತಿ ಆಚರಿಸುವ ಸಂದರ್ಭ ವಿದ್ಯಾರ್ಥಿಗಳಾದ ಚೈತ್ರಾ ಹಾಗೂ ಪಲ್ಲವಿಯವರು ‘ವೈಷ್ಣವ ಜನತೋ’ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದರು. ಈ ಸಂದರ್ಭದಲ್ಲಿ ಮೂಲ ಗೀತೆಯ ಸ್ಪೂರ್ತಿ ಪಡೆದು ಹೊಸ ಕಾಲಕ್ಕೆ ತಕ್ಕಂತೆ ಆ ಹಾಡಿನ ಸಾರವನ್ನು ಬಳಸಿಕೊಂಡು ಕವನ ರಚಿಸಲಾಯಿತು. ಜಗತ್ತಿಗೆ ಒಳಿತನ್ನು ಮಾಡಬೇಕು ಎಂಬ ಸಂದೇಶವನ್ನು ನವೀನ ರೂಪದಲ್ಲಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸಕ್ಕೆ ನಿಮಿತ್ತನಾಗಿದ್ದೇನೆ. ಇದರ ಹಿಂದಿನ ಸ್ಪೂರ್ತಿ ಬಸವಣ್ಣ, ಸಂತರು, ದಾರ್ಶನಿಕರು ಸಾರಿದ ಸಂದೇಶಗಳು. ಈ ‘ಗೀತ ಕಥನ ಚಿತ್ರ’ಕ್ಕೆ ಗಣಪತಿ ದೀವಾಣ, ಕೃಷ್ಣಪ್ರಶಾಂತ್, ಮಾಧವ ಹೊಳ್ಳ ಅವರ ಪರಿಕಲ್ಪನೆ ಹಾಗೂ ಶ್ರಮದ ಫಲವಾಗಿ ಕವನದ ಅರ್ಥ ಸೌಂದರ್ಯ ಇಮ್ಮಡಿಗೊಂಡಿದೆ. ಈ ತಂಡ ಕವನದ ಅರ್ಥವನ್ನು ಸಹಜ ರೀತಿಯಲ್ಲಿ ದೃಶ್ಯವಾಗಿ ಮೂಡಿಸುವಲ್ಲಿ ಸಫಲವಾಗಿದೆ” ಎಂದರು.
ಗೀತೆಯ ರೆಕಾರ್ಡಿಂಗ್:
ಕವಿತೆಯನ್ನು ಆಲಿಸಿದ ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂತಿಮ ವರ್ಷ ವ್ಯಾಸಂಗನಿರತರಾಗಿದ್ದ ವಿದ್ಯಾರ್ಥಿ ಗಣಪತಿ ದೀವಾಣ ಅವರು ಪರಿಕಲ್ಪನೆಯೊಂದಿಗೆ ನಿರ್ದೇಶನ ಮಾಡುವ ಮೂಲಕ ಗೀತೆಗೆ ಜೀವ ತುಂಬಿದ್ದಾರೆ. ಡಿಜಿಟಲ್ ಫಿಲ್ಮ್ ಮೇಕಿಂಗ್ ಬಿ.ವೋಕ್ ಸಹಾಯಕ ಪ್ರಾಧ್ಯಾಪಕ ಮಾಧವ ಹೊಳ್ಳ ಅವರು ವಿಡಿಯೋ ರಚನೆಗೆ ತಮ್ಮ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭನ ನೀಡುವ ಜೊತೆಗೆ ಹಾಡು ಹಾಗೂ ದೃಶ್ಯಾವಳಿ ಸುಂದರವಾಗಿ ಮೂಡಿಬರುವಲ್ಲಿ ಸಹಕರಿಸಿದ್ದಾರೆ. ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ತಂತ್ರಜ್ಞ ಸಂಯೋಜಕ ಕೃಷ್ಣಪ್ರಶಾಂತ್ ವಿ. ಅವರು ತೆರೆ ಮೇಲೆ ಕಾಣುವ ಸುಂದರ ದೃಶ್ಯಗಳನ್ನು ತಮ್ಮ ತಂಡದೊಂದಿಗೆ ಸೆರೆಹಿಡಿದಿದ್ದಾರೆ. ನೆರಳು ಬೆಳೆಕಿನ ಆಟದೊಂದಿಗೆ ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ನೋಡುಗನಿಗೆ ಗೋಚರಿಸುವಂತೆ ಕಾಳಜಿ ವಹಿಸಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ಶೀರ್ಷಿಕೆ ಗೀತೆ ಹಾಡಿದ ಕನ್ನಡದ ಪ್ರತಿಭಾನ್ವಿತ ಗಾಯಕಿ ನಿನಾದ ನಾಯಕ್ ಅವರು ಹಾಡುವ ಮೂಲಕ ಮೋಡಿ ಮಾಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ನಿರ್ವಹಣೆಯೊಂದಿಗೆ ರೆಕಾರ್ಡಿಂಗ್ ಪ್ರಕ್ರಿಯೆ ನಡೆಸಿದ್ದಾರೆ. ರೈಟ್ ಕ್ಲಿಕ್ ಕ್ರಿಯೇಷನ್ಸ್ ಸಂಸ್ಥೆ ಚಿತ್ರೀಕರಣ ಉದ್ದೇಶಕ್ಕೆ ಕ್ಯಾಮರಾ ನೀಡುವ ಜೊತೆಗೆ ಸಂಸ್ಥೆಯ ಪೃಥ್ವಿರಾಜ್ ಜೈನ್ ಅವರೂ ಸಹಕಾರ ನೀಡಿದ್ದಾರೆ.
ಪಾತ್ರವರ್ಗ ಹಾಗೂ ಚಿತ್ರೀಕರಣ:
ರಂಗಭೂಮಿ ಹಿರಿಯ ಕಲಾವಿದ ಜೀವನ್‍ರಾಂ ಸುಳ್ಯ ಅವರು ಶಿಕ್ಷಕನ ಪಾತ್ರ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರ ಮಗಳ ಪಾತ್ರದಲ್ಲಿ ಶ್ರೇಯಾ ಕಾಣಿಸಿಕೊಂಡಿದ್ದಾರೆ. ಉಪನ್ಯಾಸಕಿ ಗೀತಾ ವಸಂತ್ ಇಜಿಮಾನ್ ಹಾಗೂ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳು ಈ ಗೀತ ಕಥನ ಚಿತ್ರದಲ್ಲಿದ್ದಾರೆ. ಎಸ್.ಡಿ.ಎಂ. ಶಾಲೆ, ರತ್ನಮಾನಸ ಮೊದಲಾಗಿ ಉಜಿರೆಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಮಳೆಗಾಲದ ಸೊಬಗನ್ನು ಸೆರೆಹಿಡಿಯುವ, ನಿಸರ್ಗವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆಸಲಾಗಿದೆ.


ತಂಡ:
ಗುರುಗಣೇಶ ಭಟ್ ಡಬ್ಗುಳಿ, ಪ್ರಶಾಂತ್ ಕೆಳಗೂರು, ಶ್ರೀನಿಧಿ ನವಾಥೆ, ಆ್ಯಂಟನಿ, ಅಭ್ಯುದಯ ಜೈನ್ ನಿರ್ದೇಶನ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸ್ಕಂದ ಆಗುಂಬೆ ಸಂಭಾಷಣೆ ಬರೆದರೆ, ಕೃಷ್ಣಪ್ರಶಾಂತ್ ಅವರ ಛಾಯಾಗ್ರಹಣಕ್ಕೆ ವಿದ್ಯಾರ್ಥಿ ಶರತ್‍ಕುಮಾರ್ ಸಹಾಯಕರಾಗಿ ಸಹಕಾರ ನೀಡಿದ್ದಾರೆ. ಶಿವಪ್ರಸಾದ್ ಹಳುವಳ್ಳಿ ಸಹ ಛಾಯಾಗ್ರಹಣದಲ್ಲಿ, ಕಾರ್ತಿಕ್ ಶೆಟ್ಟಿ ಸಂಕಲನದಲ್ಲಿ ಸಹಕರಿಸಿದ್ದಾರೆ. ಶೈಲೇಶ್ ಉಜಿರೆ ಅವರು ಶೀರ್ಷಿಕೆ ವಿನ್ಯಾಸ, ಮುರಳೀ ಅಬ್ಬೆಮನೆ ಅವರು ಫೋಟೋ ಪ್ರೊಸೆಸಿಂಗ್ ಮೂಲಕ ಸಾಥ್ ನೀಡಿದ್ದಾರೆ. ಎಸ್.ಡಿ.ಎಂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಬಿ.ವೋಕ್ ವಿದ್ಯಾರ್ಥಿಗಳು ಚಿತ್ರೀಕರಣದಲ್ಲಿ ಸಹಕಾರ ನೀಡಿದ್ದಾರೆ. ಎಸ್.ಡಿ.ಎಂ ಬಿ.ವೋಕ್ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಜೈನ್ ಪ್ರಚಾರ ವಿನ್ಯಾಸ ರೂಪಿಸಿದ್ದು, ಬಿ.ವೋಕ್ ಕೋರ್ಸ್‍ನ ಸಂಯೋಜಕ ಸುವೀರ್ ಜೈನ್ ಬೆಂಬಲ ನೀಡಿದ್ದಾರೆ.
ಬಿಡುಗಡೆ:
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮದಿನವಾದ ನ.25ರಂದು ಸಂಜೆ 6 ಗಂಟೆಗೆ ಈ ಆಲ್ಬಂ ಸಾಂಗ್ ‘ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್ ಎಸ್.ಡಿ.ಎಂ. ಕಾಲೇಜ್ ಉಜಿರೆ’ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಕೇವಲ 20 ಗಂಟೆಯೊಳಗೆ 6 ಸಾವಿರಕ್ಕೂ ಹೆಚ್ಚು ವೀಕ್ಷಕರನ್ನು ಗಳಿಸುವ ಜೊತೆಗೆ ವಿಭಿನ್ನ ಪ್ರಯತ್ನದ ಮೂಲಕ ಜನಮೆಚ್ಚುಗೆಗೂ ಪಾತ್ರವಾಗಿದೆ.
ಸಮಾಜಿಕ ಸಂದೇಶದ ಮೂಲಕ ಮಾನವೀಯ ಮೌಲ್ಯವನ್ನು ಸಾರುವ ಹಾಗೂ ಜನತೆಯಲ್ಲಿ ಭಾವೈಕ್ಯತೆ ಮೂಡಿಸುವ ಪ್ರಯತ್ನ ಜನಸಮಾನ್ಯರನ್ನೂ ತಲುಪಿ ಶಾಂತಿಯುತ ಸಮಾಜ ನಿರ್ಮಾಣವಾಗಬೇಕಿದೆ. ಹೊಸ ರೀತಿಯ ‘ಗೀತ ಕಥನ ಚಿತ್ರ’ ಪ್ರಸ್ತುತಪಡಿಸಿದ ‘ಪರಹಿತ ಬಯಸೋ’ ತಂಡಕ್ಕೆ ಪ್ರಜಾ ಪ್ರಕಾಶ ತಂಡದ ಶುಭಹಾರೈಕೆಗಳು.

error: Content is protected !!