ಆತ್ಮನಿರ್ಭರಕ್ಕೆ ಪಕ್ಷಾತೀತ ಬೆಂಬಲ : ಪ್ರತಾಪ್‍ಸಿಂಹ ನಾಯಕ್: ಅರಸಿನಮಕ್ಕಿಯಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ 

ಅರಸಿನಮಕ್ಕಿ: ಉದ್ಯೋಗ ನೈಪುಣ್ಯ ತರಬೇತಿ ಶಿಬಿರಗಳು ಜೀವನಕ್ಕೆ ಹೊಸ ದಿಕ್ಕು ನೀಡಬಲ್ಲುದು ಎಂದು ನಿರೂಪಿತವಾಗಿದೆ. ಶಿಬಿರದಲ್ಲಿ ಭಾಗವಹಿಸಿ ಬದಲಾಗುವ ಸಂಕಲ್ಪ, ವಿಶ್ವಾಸವನ್ನು ಬೆಳೆಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಗ್ರಾಮ ವಿಕಾಸ ಸಮಿತಿ ಮಂಗಳೂರು, ಸಹಕಾರ ಭಾರತಿ ದಕ್ಷಿಣ ಕನ್ನಡ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇವರ ಸಹಯೋಗದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಅರಸಿನಮಕ್ಕಿಯ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಒಂದು ವಾರ ನಡೆಯುವ ಉದ್ಯೋಗ ನೈಪುಣ್ಯ ತರಬೇತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅನುಷ್ಠಾನಿಸಿ ನಮ್ಮೊಳಗಿನ ಮತ್ತು ದೇಶದ ಆತ್ಮಶಕ್ತಿಯನ್ನು ಜಾಗೃತಿಗೊಳಿಸುತ್ತಿದೆ. 21ನೇ ಶತಮಾನ ಭಾರತದ ಶತಮಾನವಾಗಿದ್ದು ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗುವತ್ತ ಭಾರತ ದಾಪುಗಾಲಿಡುತ್ತಿದೆ. ಪಕ್ಷ ರಾಜಕೀಯªನ್ನೂ ಮೀರಿ ಆತ್ಮನಿರ್ಭರವನ್ನು ಎಲ್ಲರೂ ಬೆಂಬಲಿಸುತ್ತಿರುವುದು ಶ್ಲಾಘನೀಯ. ನಾನು ಒಳ್ಳೆಯದಾಗಬೇಕು, ಊರು ಒಳ್ಳೆಯದಾಗಬೇಕು ಆ ಮೂಲಕ ದೇಶಕ್ಕೆ ಒಳಿತಾಗಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‍ನ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರೀ, ಹಿರಿಯರಾದ ವೇಣುಗೋಪಾಲ ಶೆಣೈ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಅರಸಿನಮಕ್ಕಿ ಶಾಲಾ ಸಂಚಾಲಕರಾದ ವಾಮನ ತಾಮ್ಹನ್‍ಕರ್ ಉಪಸ್ಥಿತರಿದ್ದರು. ವಿಭಾಗ ಸಹಕಾರ್ಯವಾಹ ಸುಧೀರ್ ಸಿದ್ದಾಪುರ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರಾವ್ಯ, ಮಾನಸ, ಧನಿಷ್ಕ ಪ್ರಾರ್ಥಿಸಿದರು. ರಾಘವೇಂದ್ರ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಕಾರ ಭಾರತಿ ತಾಲೂಕು ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು. ಮಾಧ್ಯಮ ಸಂಯೋಜಕ ವೃಷಾಂಕ್ ಖಾಡಿಲ್ಕರ್ ವಂದಿಸಿದರು.

error: Content is protected !!