ಅಪರಾಧಿಗಳಿಗೆ ಸಿಂಹಸ್ವಪ್ನವಾದ ಪೊಲೀಸ್ ಸಿಬ್ಬಂದಿಗೆ ಚಿನ್ನದ ಪದಕ: ಉದಯ ರೈ ಮಂದಾರರಿಗೆ‌ ಗೌರವ: ರಂಗಭೂಮಿ, ಕಲಾಕೃತಿ ರಚನೆ, ಕೃಷಿಯಲ್ಲೂ ಆಸಕ್ತಿ

ಬಂಟ್ವಾಳ: ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಂಬ್ರದ ಉದಯ ರೈ ಮಂದಾರರವರು 2017 ನೇ ಸಾಲಿನ ಮುಖ್ಯ ಮಂತ್ರಿಯವರ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ದಿ.ನಾರಾಯಣ ರೈ ಮತ್ತು ಲಲಿತಾ ರೈಯವರ ಪುತ್ರರಾಗಿರುವ ಇವರು ಸಿನಿಮಾ ನಟ, ನಿರ್ದೇಶಕ ಸುಂದರ ರೈ ಮಂದಾರರವರ ಸಹೋದರರಾಗಿದ್ದಾರೆ. ಉದಯ ರೈಯವರು 2000 ಜೂನ್ 16ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಆರಕ್ಷಕರಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಪ್ರಥಮವಾಗಿ ತಮ್ಮ ಸೇವೆಯನ್ನು ಆರಂಭಿಸಿದ್ದರು.
ಅಪರಾಧ ಪತ್ತೆಯಲ್ಲಿ ಮುತುವರ್ಜಿ:
ಬಂಟ್ವಾಳ ಬಳಿಕ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ (ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗ )ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೇವೆಗೆ ಸೇರಿದಂದಿನಿಂದ ವಿಶೇಷವಾಗಿ ಅಪರಾಧ ಪತ್ತೆ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಆನೇಕ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಆನೇಕ ಬಹುಮಾನಗಳನ್ನೂ ಪಡೆದುಕೊಂಡಿದ್ದಾರೆ. ಇವರ ಸಹಕಾರದಿಂದ ಅನೇಕ ಕ್ಲಿಷ್ಟಕರ ಸನ್ನಿವೇಶಗಳ ಅಪರಾಧ ಪ್ರಕರಣಗಳಲ್ಲಿಯೂ ಅಪರಾಧಿಗಳ ಪತ್ತೆ ಹಚ್ಚಲಾಗಿದೆ.


ಸೈನೈಡ್ ಮೋಹನ ಪ್ರಕರಣ ತನಿಖೆಯಲ್ಲಿ ಭಾಗಿ:
2009ರಲ್ಲಿ ಅಮಯಕ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಗುತ್ತೇನೆಂದು ನಂಬಿಸಿ ಸೈನೆಡ್ ನೀಡಿ ಸೀರಿಯಲ್ ಕೊಲೆಗಳಿಗೆ ಕಾರಣವಾದ ಕುಖ್ಯಾತ ಮೋಹನ್ ಕುಮಾರ್‌ ನನ್ನು ಬಂಧಿಸಿ 20 ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಹಾಗೂ ತನಿಖೆಯಲ್ಲಿಯೂ ತನಿಖಾಧಿಕಾರಿ ಜೊತೆ ಸಹಕರಿಸಿದ್ದಾರೆ. 2012 ರಲ್ಲಿ ಪುಂಜಾಲಕಟ್ಟೆ ಠಾಣಾ ಸರಹದ್ದಿನ ಬಾರ್ಯ ಎಂಬಲ್ಲಿನ ಮುಸ್ಲಿಂ ಮಹಿಳೆ ಖತೀಜಮ್ಮ ಕೊಲೆ ಆರೋಪಿಗಳ ಪತ್ತೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2013 ರಲ್ಲಿ ಬೆಳ್ತಂಗಡಿ ಠಾಣಾ ಸರಹದ್ದಿನ ಬಂಗಾಡಿ ಜೈನ ಬಸದಿಯಿಂದ ಕಳವಾದ 7 ತೀಥಂಕರ ವಿಗ್ರಹವನ್ನು ಹಾಗೂ ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕಳವಾದ ಚಿನ್ನ ಬೆಳ್ಳಿಯ ಆಭರಣಗಳನ್ನು ಪತ್ತೆ ಹಚ್ಚುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 2016ರಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಸರಹದ್ದಿನ ಇಸ್ಮಾಯಿಲ್ ಬೆಳ್ಳಾರೆ ಕೊಲೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ೨೦೧೬ ರಲ್ಲಿ ಧರ್ಮಸ್ಥಳ ಪೊಲೀಸು ಠಾಣಾ ಸರಹದ್ದಿನ ಕಕ್ಕಿಂಜೆ ವೃದ್ಧ ದಂಪತಿ ಮನೆ ದರೋಡೆ ಮಾಡಿ ದಂಪತಿಗಳ ಕೊಲೆ ಮಾಡಿದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಭಟ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಬೆತ್ತಾಡಿ ಸುಬ್ರಹ್ಮಣ್ಯ ಭಟ್ ಕೊಲೆ ಆರೋಪಿಗಳ ಪತ್ತೆ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.


ಈ ಮೂಲಕ ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದು, ನ್ಯಾಯದ ಪರವಾಗಿ ಕಾರ್ಯನಿರ್ವಹಿಸುವ ಮೂಲಕ ಜನಮೆಚ್ಚುಗೆ ಗಳಿಸುವ ಜೊತೆಗೆ ಇದೀಗ ಸರಕಾರದಿಂದ ಗುರುತಿಸಿಕೊಂಡು ಚಿನ್ನದ ಪದಕ ಪಡೆಯುತ್ತಿದ್ದಾರೆ.


ಕಲಾವಿದನಾಗಿ ಉದಯ ರೈ:

ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕ ಕರ್ತವ್ಯಕ್ಕೆ ಪ್ರಶಸ್ತಿಗಳು ಅರಸಿಕೊಂಡು ಬಂದಿದೆ. ಒಂದೆಡೆ ಸರಕಾರಿ ಕೆಲಸ. ಬಿಡುವಿನ ವೇಳೆ ರಂಗಭೂಮಿ, ಕಲಾಕೃತಿ ರಚನೆ. ಜತೆಗೆ ಕೃಷಿಕ.

ಅಣ್ಣ ಸುಂದರ ರೈ ಮಂದಾರ ಅವರಂತೆ ರಂಗಭೂಮಿ ಕಲಾವಿದರೂ ಹೌದು. ಅದರ ಜತೆಗೆ ಪೈಟಿಂಗ್ ( ಕಲಾಕೃತಿ) ಆಸಕ್ತಿಯಿದ್ದು, ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ.

 

error: Content is protected !!