ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಂಘ, ಸಹ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಜೈ ಕನ್ನಡಮ್ಮ ವಾರಪತ್ರಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಧ್ಯಯನ ಸಿ.ಎ. ಅವರ ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದಿಸಿರುವ ಕರ್ನಾಟಕ ಜನರಲ್ ನಾಲೇಜ್ ಕೃತಿಯ ಅನಾವರಣ ಕಾರ್ಯಕ್ರಮ ನ. 21 ರಂದು ಅಪರಾಹ್ನ 3 ಗಂಟೆಗೆ ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಏಕತಾ ಸೌಧ ಸಭಾಭವನದಲ್ಲಿ ನಡೆಯಲಿದೆ ಎಂದು ಪತ್ರಕರ್ತ ದೇವಿಪ್ರಸಾದ್ ತಿಳಿಸಿದರು.
ಅವರು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೃತಿಯ ಅನಾವರಣದ ಕುರಿತು ಮಾಹಿತಿ ನೀಡಿದರು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ, ಲೇಖಕ ಅರವಿಂದ ಚೊಕ್ಕಾಡಿ ಮತ್ತು ಶಿಕ್ಷಕಿ ಪ್ರಮೀಳಾ ದಂಪತಿಗಳ ಪುತ್ರಿ ಅಧ್ಯಯನ ಅವರು ಎಸ್‌ಎಸ್‌ಎಲ್‌ಸಿ ಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ್ದು, ಪ್ರಸ್ತುತ ಮಹಾವೀರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಕೊರೋನಾ ಸಂದರ್ಭ ಶಾಲಾ ಕಾಲೇಜು ಸ್ಥಗಿತಗೊಂಡಿದ್ದು, ಈ ಸಂದರ್ಭ ಅಧ್ಯಯನ ಅವರು ಚಾಣಕ್ಯ ಪ್ರಕಾಶನದ ಚಾಣಕ್ಯ ಕಣಜದ ಪುಸ್ತಕದಿಂದ ಉಪಯುಕ್ತವಾಗುವ 170 ಪುಟಗಳ ಕೃತಿಯನ್ನು ಕನ್ನದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿದ್ದಾರೆ. ಈಕೆ ವಿದ್ಯಾರ್ಥಿ ದೆಸೆಯಲ್ಲಿ ಬರವಣಿಗೆಗ ಒತ್ತು ನೀಡಿರುವುದನ್ನು ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಇಂಗ್ಲೀಷ್ ಕೃತಿ ರಚಿಸಿರುವುದು ಶ್ಲಾಘನೀಯ. ವಿದ್ಯಾರ್ಥಿನಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ನ.21 ರಂದು ಸರಕಾರಿ ನೌಕರರ ಸಂಘದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಎನ್.ಎಂ. ಜೋಸೆಫ್ ಅವರು ಪುಸ್ತಕ ಅನಾವರಣಗೊಳಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಘಟಕ ಸಂಘಟನಾ ಕಾರ್ಯದರ್ಶಿ ಡಾ.ಜಯಕೀರ್ತಿ ಜೈನ್ ವಹಿಸಲಿದ್ದಾರೆ ಎಂದರು.
ಮುಖ್ಯ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಅವರು, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಹಾಗೂ ಬರವಣಿಗೆಗ ಪ್ರೋತ್ಸಾಹ ನೀಡುವುದು ಅತ್ಯಗತ್ಯ. ಶೈಕ್ಷಣಿಕಕ್ಕೆ ಸಂಬಂಧಪಟ್ಟ ಕರ್ನಾಟಕ ಜನರೆಲ್ ನಾಲೇಜ್ ಕೃತಿಯನ್ನು ಅಧ್ಯಯನ ಅವರು ರಚಿಸಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರ ಸಂಘಗಳು ಸಹಕಾರ ನೀಡಿದೆ ಎಂದರು.
ಗೋಷ್ಠಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ನಾರಾವಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ದೇವಾಡಿಗ ಇದ್ದರು.