ಉಜಿರೆ: ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಹಾಗೂ ಬೆಳ್ತಂಗಡಿಯ ರೋಟರಿ ಕ್ಲಬ್‌ನ ಬಹು ಅಪೇಕ್ಷಿತ ಕಾರ್ಯಕ್ರಮ ವಿನ್ಸ್ – ವಾಶ್ ಇನ್ ಸ್ಕೂಲ್ಸ್ ಪಾತ್ಯಕ್ಷಿಕೆ ವಿಡಿಯೋವನ್ನು ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಡಾ. ಬಿ. ಯಶೋವರ್ಮ ಬಿಡುಗಡೆಗೊಳಿಸಿದರು.
ಡಾ.ಬಿ.ಯಶೋವರ್ಮ ಅವರು ಮಾತನಾಡಿ, ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರ ನಮ್ಮ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಕೈ ತೊಳೆದುಕೊಳ್ಳುವುದು ಸಣ್ಣ ವಿಷಯ ಎಂದೆನಿಸಿದರೂ, ಅದರಿಂದ ನಮ್ಮ ಆರೋಗ್ಯಕ್ಕಾಗುವ ಪ್ರಯೋಜನ ಇಂತಹದ್ದೇ ಸಾಲಿಗೆ ಸೇರುವ ವಿಷಯ.
ಬಹಳಷ್ಟು ಸಾಂಕ್ರಾಮಿಕ ರೋಗಗಳನ್ನು ಸರಿಯಾದ ವಿಧಾನದಲ್ಲಿ ಕೈತೊಳೆಯುವುದರ ಮೂಲಕ ತಡೆಗಟ್ಟಬಹುದು. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೈ ತೊಳೆಯುವುದರ ಮಹತ್ವವನ್ನು ನಾವೆಲ್ಲರೂ ಕಂಡುಕೊಂಡಿದ್ದೇವೆ. ಆದರೆ ಇದು ಕೊರೋನಾ ಇರುವವರೆಗೆ ಮಾತ್ರವಲ್ಲ, ಆ ನಂತರವೂ ಮುಂದುವರೆಯಬೇಕು ಎಂಬುದು ರೋಟರಿಯ ಮುಖ್ಯ ಉದ್ದೇಶ ಎಂದರು.
ಈ ವೀಡಿಯೊದ ಮೂಲಕ ಸರಿಯಾದ ರೀತಿಯಲ್ಲಿ ಕೈತೊಳೆದುಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ ಎಂದು ವಿನ್ಸ್ ಕಾರ್ಯಕ್ರಮದ ಆಶಯದ ಕುರಿತು ಮಾಹಿತಿ ನೀಡಿದರು.
ಬೆಳ್ತಂಗಡಿ ರೋಟರಿಯ ವಿನ್ಸ್ ಕ್ಲಬ್‌ನ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ವಿನ್ಸ್ ವೀಡಿಯೋವನ್ನು ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ರೂಪಿಸಲಾಗಿದೆ. ಈ ವೀಡಿಯೊದಲ್ಲಿ ಸೋಪ್ ಬಳಸಿ ಸೂಕ್ತವಾದ ವಿಧಾನದಲ್ಲಿ ಕೈತೊಳೆಯುವುದು ಹೇಗೆ ಎಂಬುದನ್ನು 8 ಹಂತಗಳ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿನ್ಸ್ ನ ಜಿಲ್ಲಾಧ್ಯಕ್ಷ ನಿತಿನ್ ಎನ್. ಕಾಮತ್ ವೀಡಿಯೊ ಮೂಲಕ ಶುಭಹಾರೈಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ. ವಿ ಉಪಸ್ಥಿತರಿದ್ದರು.