ವಿದ್ಯಾಭ್ಯಾಸದಿಂದ ಜವಾಬ್ದಾರಿಯುತ ನಾಗರೀಕನ ನಿರ್ಮಾಣ: ಹರೀಶ್ ಕುಮಾರ್

ಅಳದಂಗಡಿ: ವಿದ್ಯಾಭ್ಯಾಸವು ನಮ್ಮನ್ನು ಜವಾಬ್ದಾರಿಯುತ ನಾಗರೀಕನನ್ನಾಗಿ‌ ಮಾಡುತ್ತದೆ. ಶಾಲೆ ಪ್ರಾರಂಭವಾಗದಿದ್ದರೂ ಓದು, ಬರಹವನ್ನು ಯಾರೂ ನಿಲ್ಲಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹರೀಶ ಕುಮಾರ್ ಹೇಳಿದರು.
ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ವಠಾರದಲ್ಲಿ, ಶ್ರೀ ಸತ್ಯದೇವತೇ ದೈವಸ್ಥಾನದ ವತಿಯಿಂದ ಸೋಮವಾರ ನಡೆದ 17ನೇ ವರ್ಷದ, ಮೂರನೇ ಹಂತದ ಬರೆಯುವ ಪುಸ್ತಕಗಳ ಉಚಿತ‌‌‌ ವಿತರಣಾ ಸಮಾರಂಭ ಉದ್ಘಾಟಿಸಿ, ಮಕ್ಕಳಿಗೆ ಪುಸ್ತಕಗಳನ್ನು‌ ವಿತರಿಸಿ ಅವರು ಮಾತನಾಡಿದರು.

ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ. ಇಲ್ಲಿ ನೀಡುತ್ತಿರುವ ಪ್ರಸಾದ ರೂಪದ ಪುಸ್ತಕಗಳಿಂದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು, ನಮ್ಮ ಸಂಪಾದನೆಯ ಒಂದು ಭಾಗ ಸಾಮಾಜಿಕ‌ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂಬ ಮಾತಿಗೆ ತಕ್ಕಂತೆ ಶಿವಪ್ರಸಾದ ಅಜಿಲರು ಇದ್ದಾರೆ. ಅವರು ವರ್ಷಕ್ಕೆ 6 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕಗಳನ್ನು‌ ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ಹಿಂದು ಯುವಶಕ್ತಿ ಆಲಡ್ಕ ಎಂಬ ವಾಟ್ಸಾಪ್ ಗುಂಪಿನ ಸದಸ್ಯರು ಅನಾರೋಗ್ಯ ಪೀಡಿತ ನಡಾಯಿ ಮನೆಯ ಬಾಲಕೃಷ್ಣ ಶೆಟ್ಟಿ ಅವರಿಗೆ ಆಹಾರ ಧಾನ್ಯವನ್ನು ಅತಿಥಿಗಳ ಮೂಲಕ ಹಸ್ತಾಂತರಿಸಿದರು.  ನಾವರಗುತ್ತು ಜಗದೀಶ ಹೆಗ್ಡೆ ವೇದಿಕೆಯಲ್ಲಿದ್ದರು. ಪಂಚಮಿ ಮಯ್ಯ ಪ್ರಾರ್ಥಿಸಿದರು. ಕಾರ್ಯಕ್ರಮದ ರೂವಾರಿ, ದೈವಸ್ಥಾನದ ಮೊಕ್ತೇಸರ ಶಿವಪ್ರಸಾದ ಅಜಿಲ ಪ್ರಸ್ತಾವಿಸಿ, ಸ್ವಾಗತಿಸಿದರು. ಮೋಹನದಾಸ ಅಳದಂಗಡಿ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.

error: Content is protected !!