ಮಂಗಳೂರು: ಭಾರತ ಭಾವೈಕ್ಯತೆಯ ಮೂಲಕ, ಹಲವು ಜಾತಿ, ಧರ್ಮ, ಮತಗಳ ಜನತೆ ಜೊತೆಯಾಗಿ ಬದುಕುವುದಾಗಿ ಬದುಕುವ ಕುರಿತು ತಿಳಿದಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ, ಮತ, ಪಂಥಗಳ ಹೆಸರಿನಲ್ಲಿ ಕಿತ್ತಾಟಗಳು ಹೆಚ್ಚಾಗಿವೆ. ಅದರಲ್ಲೂ ಕರಾವಳಿ ಜಿಲ್ಲೆಯಲ್ಲಿ ಹಿಂದು- ಮುಸ್ಲಿಂ ಸಮುದಾಯದವರು ವಿರೋಧಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇವೆಲ್ಲವನ್ನೂ ಮೀರಿ, ಯಾವುದೇ ಜಾತಿ ಧರ್ಮಗಳ ಚೌಕಟ್ಟಿಲ್ಲ ಎಂಬುದನ್ನು ನಿರೂಪಿಸುವ ಘಟನೆಯೊಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಜರುಗಿದೆ.
ಮಿಡಿದ ಮನ:
ಶಿವಮೊಗ್ಗ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೋಯ್ದೀನ್ ಎಂಬ ರೋಗಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಕುಟುಂಬಸ್ಥರೊಬ್ಬರು ದಾಖಲಾದ ಕಾರಣ ಅವರನ್ನು ನೋಡಿಕೊಳ್ಳಲು ಹಿಂದೂ ಸಮುದಾಯದ ಮೋಹನ್ ಹಾಗೂ ಜೀತೇಶ್ ಗೌಡ ಅವರು ಆಸ್ಪತ್ರೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಮೋಯ್ದೀನ್ ಹಾಗೂ ಅವರ ಕುಟುಂಬ ಸಂಕಷ್ಟದಲ್ಲಿರುವ ವಿಚಾರ ತಿಳಿದು, ಅವರಿಗೆ ಸಹಾಯ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ. ಕೂಡಲೇ ಆಪಾದ್ಭಾಂದವ ಎಂದು ಖ್ಯಾತರಾದ ಆಸಿಫ್ ಅವರಿಗೆ ಕರೆ ಮಾಡಿ, ಮೋಯ್ದೀನ್ ಅವರ ಸಮಸ್ಯೆ ಕುರಿತು ಮಾಹಿತಿ ನೀಡುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ಆಸಿಫ್ ಅವರು ಮೋಯ್ದೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಮೋಯ್ದೀನ್ ಅವರ ಪುತ್ರಿಯನ್ನೂ ಆಸ್ಪತ್ರೆಗೆ ಕರೆಸಿ, ತನ್ನ ತಂದೆಯ ಸಹಾಯಕ್ಕೆ ನಿಲ್ಲುವಂತೆ ಮಾಡಲು ಸಕಲ ವ್ಯವಸ್ಥೆಗಳನ್ನೂ ಮಾಡಲು ಸಹಕಾರ ನೀಡುತ್ತಾರೆ.
ಚಿಕಿತ್ಸೆಗೆ ಸಹಾಯ:
ಮೋಹನ್, ಜಿತೇಷ್ ಗೌಡ ಹಾಗೂ ಆಸಿಫ್ ಅವರ ಮೂಲಕ ಮೊಯ್ದೀನ್ ಅವರು ಚಿಕಿತ್ಸೆ ಪಡೆಯಲು ಸಹಾಯಕವಾಯಿತು. ಧರ್ಮ, ಜಾತಿಯ ಪರಿವೆಯಿಲ್ಲದೆ, ರೋಗಿಯೊಬ್ಬ ಉತ್ತಮ ಚಿಕಿತ್ಸೆ ಪಡೆಯಬೇಕು ಎನ್ನುವ ಮಾನವೀಯ ಗುಣಕ್ಕೆ ಗೌರವ ಸಲ್ಲಬೇಕಾಗಿದೆ. ಕರುಣೆಯನ್ನು ತೋರುವ ಮೂಲಕ ಜಾತಿಗಳನ್ನು ಮೀರಿದ ಬಂಧ ಈ ಜಗತ್ತಿನಲ್ಲಿದೆ ಎಂಬುದನ್ನು ನಿರೂಪಿಸಿದ ಎಲ್ಲರಿಗೂ ಪ್ರಜಾಪ್ರಕಾಶ ತಂಡದ ಬಿಗ್ ಸೆಲ್ಯೂಟ್.