ನ. 14ರಂದು ಬೆಳ್ತಂಗಡಿಯಲ್ಲಿ ‘ದೀಪಾವಳಿ ದೋಸೆ ಹಬ್ಬ’: ಬಿ.ಜೆ.ಪಿ. ಯುವ ಮೋರ್ಚಾದಿಂದ ಆಯೋಜನೆ

ಬೆಳ್ತಂಗಡಿ: ಶಾಸಕ ಶ್ರೀ ಹರೀಶ್ ಪೂಂಜ ಅವರ ಕಲ್ಪನೆಯಂತೆ, ದೀಪಾವಳಿ ಹಬ್ಬದ ಪ್ರಯುಕ್ತ ನ. 14 ಬಿ.ಜೆ.ಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳಗ್ಗೆ 8ರಿಂದ ಸಂಜೆ 6ಗಂಟೆ ವರೆಗೆ ಬೆಳ್ತಂಗಡಿಯಲ್ಲಿ ‘ದೀಪಾವಳಿ ದೋಸೆ ಹಬ್ಬ’ ನಡೆಸಲಾಗುವುದು. ಜೊತೆಗೆ ನಗರಾಲಾಂಕಾರ ನಡೆಸಿ ‘ಗೋಪೂಜಾ” ಉತ್ಸವವನ್ನೂ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ ನೀಡಲಿದ್ದಾರೆ ಎಂದು ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳುನಾಡಿನ ಸಾಂಪ್ರದಾಯದಂತೆ, ಹುಳಿ ದೋಸೆಗೆ ಬಹುಮಾನ್ಯತೆ ಇದೆ. ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ತುಳುನಾಡಿನ ಪ್ರತಿ ಹಿಂದೂಗಳ ಮನೆ-ಮನೆಯಲ್ಲಿ ಹುಳಿ ದೋಸೆ ಮಾಡಿ ಸವಿಯುವುದು ಸರ್ವೆ ಸಾಮಾನ್ಯವಾಗಿದೆ. ಬದಲಾಗುತ್ತಿರುವ ಯಾಂತ್ರಿಕ ಜಗತ್ತಿನಲ್ಲಿ ತುಳುನಾಡಿನ ಮೂಲ ಆಚರಣೆಯ ಮಹತ್ವ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಯುವ ಜನಾಂಗಕ್ಕೆ ತುಳುನಾಡಿನ ಮೂಲ ಸಾಂಪ್ರದಾಯಿಕ ಆಚರಣೆಯನ್ನು ತಿಳಿಸುವ ಪ್ರಯತ್ನವಾಗಿ ಉಚಿತ ದೋಸೆ ವಿತರಣೆ ಮಾಡಲಾಗುವುದು ಎಂದರು.
ಬಿ.ಜೆ.ಪಿ. ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾರ್ಗದರ್ಶನದಲ್ಲಿ ಯುವ ಮೋರ್ಚಾ ಅಧ್ಯಕ್ಷರು ಕಾರ್ಯದರ್ಶಿಗಳು ಕಾರ್ಯಕ್ರಮ ಸಂಘಟಿಸಲಿದ್ದಾರೆ. ಸಂಜೆ 6 ಗಂಟೆಗೆ ಗೋ- ಪೂಜೆ ನಡೆಯಲಿದೆ.
ಬೆಳ್ತಂಗಡಿ ಮಂಡಲ ಹಾಗೂ ದ.ಕ. ಜಿಲ್ಲೆಯ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

error: Content is protected !!