ಬೆಳ್ತಂಗಡಿ: ಸಹಕಾರಿ ಸಂಸ್ಥೆಗಳು ಇಂದಿಗೂ ಜನರ ವಿಶ್ವಾಸವನ್ನು ಉಳಿಸಿಕೊಂಡು ಪ್ರಾಮಾಣಿಕ ಸೇವೆಯನ್ನು ನೀಡುತ್ತಿದೆ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಸಹಕಾರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು. ಇಂದು ಭ್ರಷ್ಟಾಚಾರವಿಲ್ಲದ ಆರ್ಥಿಕ ವ್ಯವಹಾರ ಸಹಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಪ್ರಾಮಾಣಿಕತೆಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ, ನೆಮ್ಮದಿಯ ಬದುಕು ಕಟ್ಟಿಕೊಂಡವರು ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ನಿರಂಜನ ಬಾವಂತಬೆಟ್ಟು ಹೇಳಿದರು.
ಅವರು ನ. 5ರಂದು ಬೆಳ್ತಂಗಡಿಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ‘ಉತ್ಕೃಷ್ಟ’ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವತಿಯಿಂದ ಅ. 31ರಂದು ಸೇವೆಯಿಂದ ವಯೋ ನಿವೃತ್ತರಾದ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ನೊಚ್ಚ ಹಾಗೂ ಬಂಗಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಿವೃತ್ತರಿಗೆ ಶುಭಾಶಂಸನೆಗೈದ ಪುತ್ತೂರಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ರಾಜು, ನಿವೃತ್ತರಿಗೆ ಆಯಸ್ಸು, ಶ್ರೇಯಸ್ಸು, ಯಶಸ್ಸು ಪ್ರಾಪ್ತವಾಗಲಿ ಎಂದು ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ನಿತ್ಯಾನಂದ ಶೆಟ್ಟಿ ಹಾಗೂ ಪುಷ್ಪಲತಾ ತಮ್ಮ ಸೇವಾವಧಿಯ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ, ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕಾಶಿಪಟ್ಣ, ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿ ಸುನಿಲ್ ಕುಮಾರ್ ಹೊಳ್ಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಪ್ರಬಂಧಕ ಮಹೇಶ್, ಮೇಲ್ವಿಚಾರಕರಾದ ಸಂದೇಶ್ ಹಾಗೂ ಹಿದಾಯತುಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಪ್ರಾಥಮಿಕ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ನಿರೂಪಿಸಿ, ಕಾರ್ಯಕ್ರಮದಲ್ಲಿ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ಸ್ವಾಗತಿಸಿದರು. ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ರಾಜ್ ಜೈನ್, ನಿತ್ಯಾನಂದ ಶೆಟ್ಟಿ ನೊಚ್ಚ ಅವರನ್ನು ಸಭೆಗೆ ಪರಿಚಯಿಸಿದರು, ಪುಷ್ಪಲತಾರನ್ನು ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಸಭೆಗೆ ಪರಿಚಯಿಸಿದರು. ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ವಂದಿಸಿದರು.