ಡಿಸೆಂಬರ್ ಬಳಿಕ ಕ್ಷೇತ್ರದ ಯಕ್ಷಗಾನ ಮಂಡಳಿ ಸಂಚಾರ: ಡಾ. ಡಿ. ವೀರೇಂದ್ರ ಹೆಗ್ಗಡೆ

 

ಧರ್ಮಸ್ಥಳ: ಕ್ಷೇತ್ರದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ‌ ಮಂಡಳಿ‌ ಒಂದು ತಿಂಗಳ‌ ಕಾಲ ಸೇವಾಕರ್ತರ ನೆರವಿನೊಂದಿಗೆ ಕ್ಷೇತ್ರದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ ಬಳಿಕ‌ ಸಂಚಾರ ಆರಂಭವಾಗಲಿದೆ‌ ಎಂದು‌ ಧರ್ಮಾಧಿಕಾರಿ‌ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.

ಅವರು ತಮ್ಮ 53ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಪ್ರಕಟಿಸಿದರು. ಎರಡು ಶತಮಾನಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ತಿರುಗಾಟ ಕಳೆದ ಮಾರ್ಚ್ ತಿಂಗಳಿನಲ್ಲಿ ಕೋವಿಡ್-19 ನಿಂದಾಗಿ ಸ್ಥಗಿತಗೊಳಿಸಲಾಗಿತ್ತು.

ಯಕ್ಷಗಾನ ಪ್ರದರ್ಶನಕ್ಕೆಸರಕಾರ ಇದುವರೆಗೂ ಸ್ಪಷ್ಟವಾದ ತೀರ್ಮಾನ ಕೈಗೊಂಡಿಲ್ಲ. ಧರ್ಮಸ್ಥಳದಲ್ಲಿ ಪ್ರತಿವರ್ಷ ದೀಪಾವಳಿಯ ಬಳಿಕ ಯಕ್ಷಗಾನ ಮೇಳ ತಿರುಗಾಟವನ್ನು ಆರಂಭಿಸುತ್ತದೆ. ಇಡೀ ರಾತ್ರಿ ಯಕ್ಷಗಾನ ಪ್ರದರ್ಶನವನ್ನು ಕಳೆದ ನಾಲ್ಕು ವರ್ಷಗಳಿಂದ ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದು, ಜನ ಮೆಚ್ಚುಗೆಯನ್ನು ಪಡೆದಿದೆ. ಪ್ರಸ್ತುತ ವರ್ಷ ಒಂದು ತಿಂಗಳು ಕಾಲ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಮಾಡಲು ಮೇಳದ ಉಸ್ತುವಾರಿಯಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸಂಬಂಧಪಟ್ಟ ಎಲ್ಲಾ ವಿಭಾಗದವರು ವ್ಯವಸ್ಥೆ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದ ಹಿಂಭಾಗದಲ್ಲಿ ವೇದಿಕೆಯನ್ನು ಹಾಕಿ 30 ಮಂದಿ ಸೇವಾಕರ್ತರಿಂದ 30 ದಿನ ಯಕ್ಷಗಾನ ಪ್ರದರ್ಶನವನ್ನು ಧರ್ಮಸ್ಥಳದಲ್ಲಿ ಸೇವೆಯಾಟವಾಗಿ ನಡೆಯಲಿದೆ.ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವದ ಬಳಿಕ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಯಕ್ಷಗಾನ ತಿರುಗಾಟವನ್ನು ಆರಂಭಿಸಲಾಗುವುದು.

error: Content is protected !!