ರಾಜಕೇಸರಿ ಸಂಘಟನೆಯಿಂದ ರಕ್ತದಾನ ಶಿಬಿರ

ಬೆಳ್ತಂಗಡಿ: ಕೊರೊನಾ ಭಯದಲ್ಲಿ ರಕ್ತದಾನ ಮಾಡಲು ಭಯಪಡುತ್ತಿರುವ ಸಮಯದಲ್ಲಿ ರಾಜಕೇಸರಿ ಸಂಘಟನೆಯ ಯುವಕರು ಇಂತಹ ಬೃಹತ್ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ರಂಜಿತ್ ಪೂಜಾರಿ ಎಚ್.ಡಿ. ತಿಳಿಸಿದರು. ಅವರು ಅಖಿಲ ಕರ್ನಾಟಕ ರಾಜಕೇಸರಿ ಮತ್ತು ಕೆ.ಎಸ್. ಹೆಗ್ಡೆ ಹಾಸ್ಪಿಟಲ್ ಮಂಗಳೂರು ಇವರ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಮಾಡಲು ಯಾರೂ ಹಿಂಜರಿಯಬಾರದು, ಎಲ್ಲಾ ಯುವಕರು ಸೇರಿ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಲೋಕೇಶ್ ಕುಲಾಲ್ ಮಾತನಾಡಿ, ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದ್ದು ರಕ್ತದ ಕೊರತೆ ಕಂಡು ಬರುತ್ತಿದೆ. ಅದ್ದರಿಂದ ರಕ್ತದಾನವನ್ನು ಆಯೋಜಿಸಿದ ರಾಜಕೇಸರಿ ಸಂಘಟನೆ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಂಘಟನೆ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸುತ್ತೇವೆ ಎಂದರು.
ವಿಜ್ಞಾನ ಎಷ್ಟೂ ಮುಂದುವರಿದರೂ ರಕ್ತವನ್ನು ಮಾತ್ರ ಮನುಷ್ಯನಿಂದ ಮನುಷ್ಯನಿಗೆ ನೀಡಲು ಸಾಧ್ಯ. ಅದ್ದರಿಂದ ರಕ್ತದಾನ ಎಂಬುವುದು ಶ್ರೇಷ್ಠ ದಾನ. ಈ ಕೊರೊನಾ ಸಮಯದಲ್ಲೂ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕಾಗಿ ಯುವಕರು ಆಗಮಿಸಿರುವುದು ಅಭಿನಂದನೀಯ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದರು.
ತಾಲೂಕು ಯುವ ಬಂಟರ ವಿಭಾಗದ ನಿಕಟ ಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ, ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸುವ ಕೆಲಸವನ್ನು ಮಾಡಬಹುದು. ರಕ್ತದಾನದ ಬಗ್ಗೆ ಜನರಲ್ಲಿ ಇರುವ ಭಯವನ್ನು ಹೋಗಲಾಡಿಸಿ, ಜಾಗೃತಿಯನ್ನು ಉಂಟುಮಾಡುವ ಕೆಲಸವನ್ನು ಮಾಡಬೇಕು. ಕೊರೊನಾದ ಈ ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗಿರುವುದರಿಂದ ಇಂತಹ ರಕ್ತದಾನ ಶಿಬಿರಗಳು ಪ್ರಯೋಜನವಾಗಲಿದೆ ಎಂದರು.
ದೀಪಕ್ .ಜಿ. ನೇತೃತ್ವದ ರಾಜಕೇಸರಿ ಸಂಘಟನೆ ಏಳು ವರ್ಷಗಳಿಂದ ವಿವಿಧ ಸೇವಾ ಯೋಜನೆಗಳಾದ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಅರ್ಥಿಕ ನೆರವು, ಮನೆ ನಿರ್ಮಾಣ, ಸ್ವಚ್ಚತಾ ಕಾರ್ಯಕ್ರಮಗಳು, ಅದಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಮನೆಗಳಿಗೆ ತೆರಳಿ ಸಹಾಯಹಸ್ತ ಮೊದಲಾದ ಹತ್ತುಹಲವು ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿಯಾಗಲಿ ಎಂದರು.
ಮಾನವ ಸ್ಪಂದನ ಅಧ್ಯಕ್ಷ ಸಬಾಸ್ಟಿನ್ ಮಾತನಾಡಿ, ರಕ್ತದಾನದಿಂದ ಸಂಬಂಧಗಳನ್ನು ಬೆಸೆಯುವಂತಹ ಕೆಲಸವಾಗುತ್ತದೆ. ಕೊರೊನಾ ಸೊಲ್ಜರ್ಸ್ ಟೀಂನಲ್ಲೂ ರಾಜಕೇಸರಿಯ ಸದಸ್ಯರಿದ್ದಾರೆ. ಅವರ ಎಲ್ಲಾ ಸೇವಾ ಕಾರ್ಯಗಳು ಇತರರಿಗೆ ಮಾದರಿಯಾಗಲಿ ಎಂದರು.
ರಾಜಕೇಸರಿ ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ಸುಮಾರು 73 ಮಂದಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಖಾಸಗಿ ಬಸ್ ನೌಕರರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ , ಡಾ. ರಶ್ಮಿ ಉಪಸ್ಥಿತರಿದ್ದರು. ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ. ನಿರೂಪಿಸಿ, ಸಂದೀಪ್ ವಂದಿಸಿದರು.

error: Content is protected !!