ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ದ 53 ನೆ ವರ್ಷದ ವರ್ಧಂತಿ: ಜನಮಂಗಳ ಕಾರ್ಯಗಳಿಗೆ ಚಾಲನೆ


ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 21 ಕೋಟಿ ರೂಪಾಯಿ ವೆಚ್ಚದಲ್ಲಿ 20,000 ಟ್ಯಾಬ್ ಗಳನ್ನು ಹಾಗೂ 10, 000 ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುವುದು.
15 ಕೋಟಿ ರೂಪಾಯಿ ವೆಚ್ಚದಲ್ಲಿ “ಯಂತ್ರ ಶ್ರೀ” ಯೋಜನೆಯಡಿ ಕೃಷಿಕರಿಗಾಗಿ ಯಂತ್ರಗಳನ್ನು ಖರೀದಿಸಿ ಕೃಷಿಗೆ ಪ್ರೋತ್ಸಾಹ ನೀಡಿ ಎಂಟು ಸಾವಿರ ಎಕರೆ ಪ್ರದೇಶದಲ್ಲಿ ಕೃಷಿಗೆ ಕಾಯಕಲ್ಪ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶನಿವಾರ ತಮ್ಮ 53 ನೆ ವರ್ಷದ ಪಟ್ಟಾಭಿಷೇಕ ವರ್ಧಂತಿಯ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
” ವಾತ್ಸಲ್ಯ” ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ವಸತಿ ಹಾಗೂ ಜೀವನಾವಶ್ಯಕ ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ 10,400 ನಿರ್ಗತಿಕ ಕುಟುಂಬಗಳನ್ನು ಗುರುತಿಸಿದ್ದು 2 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು.
ರಾಜ್ಯದಲ್ಲಿ 150 ಕೆರೆಗಳಿಗೆ ಕಾಯಕಲ್ಪ ನೀಡಲು 10 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸದ್ಯದಲ್ಲಿಯೇ ಆರೋಗ್ಯಸೇವೆಯನ್ನು ಪ್ರಾರಂಭಿಸಲಾಗುವುದು. ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ವಿಸ್ತರಣೆ, ಸರದಿ ಸಾಲಿನಲ್ಲಿ ಆನ್ಲೈನ್ ಸೇವೆ ಕಾದಿರಿಸುವಿಕೆ, ವಾಣಿಜ್ಯ ಸಂಕೀರ್ಣ ವಿಸ್ತರಣೆ ಮೊದಲಾದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು
ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ರಾಜ್ಯದಲ್ಲಿ 250ಕ್ಕೂ ಮಿಕ್ಕಿ ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 1135 ದೇವಾಲಯಗಳ ನಿರ್ಮಾಣಕ್ಕಾಗಿ 14 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಧರ್ಮಸ್ಥಳದಲ್ಲಿ ಒಂದು ತಿಂಗಳು 30 ಕಲಾವಿದರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಲಕ್ಷದೀಪೋತ್ಸವದ ಬಳಿಕ ಮೇಳದ ಕಲಾವಿದರು ಸೇವೆ ಬಯಲಾಟ ಪ್ರದರ್ಶನ ನೀಡುವರು.
ಧರ್ಮಸ್ಥಳದಲ್ಲಿ ಪರಂಪರಾನುಗತವಾಗಿ ಬಂದ ಸಾಂಪ್ರದಾಯಿಕ ಸೇವೆಗಳ ಜೊತೆಗೆ ಶಿಸ್ತುಬದ್ಧವಾಗಿ ಅನೇಕ ಮಾದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಎಲ್ಲವೂ ಮಾದರಿ ಕಾರ್ಯಕ್ರಮಗಳಾಗಿ ಮಾನ್ಯತೆ ಪಡೆದಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೀಪಾವಳಿ ಬಳಿಕ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನವಭಾರತ ನಿರ್ಮಾಣವಾಗಲಿದೆ ಎಂದು ಹೆಗ್ಗಡೆಯವರು ಹಾರೈಸಿದರು. ಅಭಿನಂದನಾ ಭಾಷಣ ಮಾಡಿದ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪಗೌಡ ಮಾತನಾಡಿ ದೈವಿಕ ಮತ್ತು ಸಾಮಾಜಿಕ ಶಕ್ತಿಯನ್ನು ಬಳಸಿಕೊಂಡು ಅಂತರಂಗ ಮತ್ತು ಬಹಿರಂಗ ಶುದ್ದಿ ಯೊಂದಿಗೆ ಸತ್ಯ, ಧರ್ಮದ ಹಾದಿಯಲ್ಲಿ ನಡೆದ ವೀರೇಂದ್ರ ಹೆಗ್ಗಡೆಯವರು ಅನೇಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲೆಡೆ ಧರ್ಮಸ್ಥಳದ ಮಾದರಿ ಸೇವಾಕಾರ್ಯಗಳು ಅನುಷ್ಠಾನಗೊಂಡು ಎಲ್ಲಾ ಊರುಗಳಲ್ಲಿ ಧರ್ಮಸ್ಥಳದ ಪ್ರಭಾವವನ್ನು ಕಾಣಬಹುದು.
ನಂಬಿಕೆಯ ಮತ್ತು ಆಶ್ರಯದ ಕೇಂದ್ರವಾದ ಧರ್ಮಸ್ಥಳ ಧರ್ಮದ ಪರಿಕಲ್ಪನೆಯಲ್ಲಿ ಮಾನವ ಸಂಪನ್ಮೂಲ ಕೇಂದ್ರವಾಗಿ ಮಾನವಧರ್ಮವನ್ನು ಉದ್ದೀಪನಗೊಳಿಸುತ್ತದೆ. ತಮ್ಮ ನಗುಮೊಗದೊಂದಿಗೆ ಅಪೂರ್ವ ಮಾತು ಮತ್ತು ಕೃತಿಯ ಮೂಲಕ ಹೆಗ್ಗಡೆಯವರು ಜಾಗತಿಕ ಮನ್ನಣೆಗೆ ಪಾತ್ರರಾಗಿದ್ದಾರೆ ಎಂದು ಹೇಳಿ ಅಭಿನಂದಿಸಿದರು.
ಹಿರಿಯ ನೌಕರರಾದ ಹರಿನಾರಾಯಣ ನೂರಿತ್ತಾಯ (ಪ್ರಧಾನ ಅರ್ಚಕರು), ಕೃಷ್ಣಕುಮಾರ್ ಶೆಟ್ಟಿ (ಹಣ್ಣುಕಾಯಿ ವಿಭಾಗ) ಮತ್ತು ಶಂಕರ ಶೆಟ್ಟಿ (ವಸತಿ ವಿಭಾಗ) ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ  ಮೊದಲಾದ ಗಣ್ಯರು  ಉಪಸ್ಥಿತರಿದ್ದರು.

error: Content is protected !!