ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ. 20 ರಂದು ನಡೆದ ಕಳವು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ, ಅವರಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿಗಳಾದ ಕೊಕ್ಕಡದ ಕೃಷ್ಣಾನಂದ ಯಾನೆ ಕಿಣಿ, ಸಿದ್ದಿಕ್, ಇಚಿಲಂಪಾಡಿಯ ವಿನೋದ್ ಬಂಧಿತ ಆರೋಪಿಗಳು.
ಶಾಲೆಯಲ್ಲಿ ಕಂಪ್ಯೂಟರ್ ಕೋಣೆ, ಬಿಸಿಯೂಟದ ಕೊಠಡಿ ಹಾಗೂ ತರಗತಿಗಳ ಕೊಠಡಿಯ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಓಳಪ್ರವೇಶಿಸಿ ಕಂಪ್ಯೂಟರ್ ಕೊಠಡಿಯಲ್ಲಿದ್ದ 2 ಕಂಪ್ಯೂಟರ್ ಹಾಗೂ ಬಿಸಿಯೂಟದ ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದರು. ಕಳವು ಆದ ಕಂಪ್ಯೂಟರ್ ಅಂದಾಜು ಮೌಲ್ಯ ರೂ. 27 ಸಾವಿರ ರೂ. ಹಾಗೂ ಗ್ಯಾಸ್ ಸಿಲಿಂಡರ್ ಅಂದಾಜು ಮೌಲ್ಯ ರೂ 3 ಸಾವಿರ ಆಗಿದೆ.
ಪ್ರಕರಣವನ್ನು ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು, ಇಲ್ಲಿನ ಎಸ್ ಐ ಪವನ್ ಕುಮಾರ್ ನೇತೃತ್ವದ ತಂಡ ಮೂವರು ಆರೋಪಿಗಳನ್ನ ಬಂಧಿಸಿ, ಆರೋಪಿಗಳು ಕಳ್ಳತನ ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.