ಭಜನೆಯಿಂದ ಸಂಘಟನಾ ಶಕ್ತಿ, ಡಾ.ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್
ಭಜನಾ ತರಬೇತಿ ಸಮಿತಿಯಿಂದ  ೨೨ ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾಂಕೇತಿಕವಾಗಿ ‘ಪ್ರಾರ್ಥನಾ ಸಮಾವೇಶ’ ಶನಿವಾರ  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.
ಪ್ರಾರ್ಥನಾ ಸಮಾವೇಶದಲ್ಲಿ ಮಾಣಿಲದ  ಶ್ರೀ  ಮೋಹನದಾಸ ಸ್ವಾಮಿಜಿ ಮಾತನಾಡಿ, ಸಮಾಜದ ಜನಸಾಮಾನ್ಯರಲ್ಲಿ ಧಾರ್ಮಿಕ ಭಾವನೆ ಉಳಿಸುವ ಪ್ರಯತ್ನ ಭಜನಾ ಕಮ್ಮಟದಿಂದ ಸಾಧ್ಯಾವಾಗಿದೆ. ಮಾನವೀಯ ಮೌಲ್ಯವನ್ನು ನಮ್ಮಲ್ಲಿ ಅಳವಡಿಸಿಕೊಂಡು ಪ್ರಕೃತಿ ಮತ್ತು ನಿಸರ್ಗವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನಸ್ಸನ್ನು ಪರಿಶುದ್ಢ ಮಾಡಿ ಭಗವಂತನನ್ನು ಪ್ರಾರ್ಥಿಸಿ ಎಂದರು
ತುಳು ವಿದ್ವಾಂಸ, ನಿವೃತ್ತ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು,  ಭಗವಂತನ ಜಪಿಸಿ ನೆಲೆಯಾಗುವುದೇ ‘ಭಜನೆ’. ಆಡಂಬರದ ಸಂಪತ್ತು ಬದುಕಲ್ಲ, ದೇವರ ಆರಾಧನೆಯೇ ಬದುಕಿನ ಸಾರ್ಥಕತೆ ಎಂದರು.
ಅಧ್ಯಕ್ಷತೆ ವಹಿಸಿದ್ದ
ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೆಚ್ಚು ಜನ ಸೇರಿದರೆ ಅಪಾಯವೆಂದು ಅರಿತು ಸಾಂಕೇತಿಕವಾಗಿ ಈ ವರ್ಷ ‘ಪ್ರಾರ್ಥನಾ ಸಮಾವೇಶ’ವನ್ನು ನಡೆಸಿದ್ದೇವೆ. ಭಜನೆಯಿಂದ ಸಂಘಟನಾ ಶಕ್ತಿ, ಭಜನಾ ಮಂಡಳಿಗಳು ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ಭಜನೆಯ ಬಗ್ಗೆ ಗೌರವ, ಶ್ರದ್ಧೆ, ಭಕ್ತಿ ಹೆಚ್ಚಾಗಿದೆ. ಮುಂದಿನ ವರ್ಷದಿಂದ ಲಕ್ಷಾಂತರ ಜನರಿಗೆ ಭಜನಾ ಕಮ್ಮಟದ ತರಬೇತಿಯನ್ನು ವೀಕ್ಷಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಧರ್ಮಸ್ಥಳ ಭಜನಾ ಪರಿಷತ್ ನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಕಮ್ಮಟ ಸಮಿತಿ ಕೋಶಾಧಿಕಾರಿ ನಾಗೇಂದ್ರ ಅಡಿಗ, ರತ್ನವರ್ಮ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು.   ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಮಮತಾ ರಾವ್ ವಂದಿಸಿದರು.
ಪ್ರಾರ್ಥನಾ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನೋರಮಾ ತೋಳ್ಪಾಡಿತ್ತಾಯ, ರಾಮಕೃಷ್ಣ ಕಾಟುಕುಕ್ಕೆ ಹಾಗೂ ರಾಜೇಶ್ ಪಡಿಯಾರ್ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಭಜನಾ ಅಭ್ಯಾಸವನ್ನು ಮಾಡಿಸಿದರು.
ಹಿಮ್ಮೇಳದಲ್ಲಿ ಮಂಗಲದಾಸ ಗುಲ್ವಾಡಿ ಹಾಗೂ ದೇವದಾಸ್ ಪ್ರಭು ಸಹಕರಿಸಿದರು.
error: Content is protected !!