
ಬೆಂಗಳೂರು: ಕರಾವಳಿ ಮೂಲದ ಶ್ರೀ ಸತ್ಯ ಸಾರಮಾನಿ ಕಾನದ ಕಟ್ಟದರನ್ನು ಕುಲದೈವಗಳಾಗಿ ಆರಾಧಿಸುವ ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಹಾಗೂ ಅಲೇರಿ ಮೂಲಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ವಿಶೇಷ ಸಂವಾದ ನಡೆಯಿತು.
ಸಂವಾದದಲ್ಲಿ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಅಲೇರಿ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿಯದೆ ಸಮುದಾಯದ ಶಕ್ತಿಕೇಂದ್ರವಾಗಿ ರೂಪುಗೊಳ್ಳಬೇಕಿದೆ ಎಂದು ಹೇಳಿದರು.
ಅಲೇರಿ ಕ್ಷೇತ್ರದಲ್ಲಿ ತರಬೇತಿ ಕೇಂದ್ರ, ಸಮುದಾಯ ಭವನ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ₹10 ಕೋಟಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಶೀಘ್ರವೇ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಕ್ಷೇತ್ರಕ್ಕೆ ಜಮೀನು ಖರೀದಿಸಲು ಸೂಕ್ತ ಅನುದಾನವನ್ನೂ ಒದಗಿಸಲಾಗುವುದು ಎಂದರು.
ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುದಾನ
ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸೂಕ್ತ ಅನುದಾನ ಬಿಡುಗಡೆ ಮಾಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮೂಲಕ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಡಿಸಿ ಮನ್ನಾ ಜಮೀನು ಹಂಚಿಕೆಗೆ ಕ್ರಮ
ಡಿಸಿ ಮನ್ನಾ ಜಮೀನು ಹಂಚಿಕೆಗಾಗಿ ಕಳೆದ ಮೂರೂವರೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಜಮೀನು ಹಂಚಿಕೆ ಮಾಡುವ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿಯೂ ವಾಗ್ದಾನ ಮಾಡಲಾಗಿದೆ ಎಂದು ಮುಖಂಡರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಸಚಿವ ಮುನಿಯಪ್ಪ ಅವರು, ಡಿಸಿ ಮನ್ನಾ ಜಮೀನು ಹಂಚಿಕೆ ಕುರಿತು ತಕ್ಷಣವೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಗತ್ಯ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಅಲೇರಿಯಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ
ಅಲೇರಿ ಮೂಲಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಕೆಗಳ ಜತೆಗೆ ಸಾಮಾಜಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಈ ಹಿನ್ನೆಲೆಯಲ್ಲಿ ಅಲೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸಲು ಸೂಕ್ತ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂವಾದದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಮಿಥುನ್ ರೈ, ಸುಳ್ಯದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ, ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದಿರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ನೀಲಯ್ಯ ಗಾಳಿಗುಡ್ಡೆ, ಗೌರವಾಧ್ಯಕ್ಷ ಸುರೇಶ್ ಹಾರ್ಡಿಕೊಪ್ಪ, ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಜಾವಳಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.