ಪ್ರಕಾಶ್ ಶೆಟ್ಟಿಯವರ ಕಾರ್ಯವೈಖರಿ ರಾಜ್ಯದ ಪಿಡಿಒಗಳಿಗೆ ಮಾದರಿ: ವಿಜಯಪ್ರಕಾಶ್: ಉಜಿರೆಯಲ್ಲಿ ಅದ್ದೂರಿಯಾಗಿ ನಡೆದ ‘ಪ್ರಕಾಶಾಭಿವಂದನಮ್’ ಕಾರ್ಯಕ್ರಮ: | ‘ಪ್ರಕಾಶ ಪರ್ವ’ ಅಭಿನಂದನ ಕೃತಿ ಲೋಕಾರ್ಪಣೆ | 20ಕ್ಕೂ ಅಧಿಕ ಸಂಘ-ಸಂಸ್ಥೆಗಳಿಂದ ಗೌರವಾರ್ಪಣೆ:

 

 

 

 

ಉಜಿರೆ: ನೊಚ್ಚ ಪ್ರಕಾಶ್ ಶೆಟ್ಟಿಯವರ ಸಾಧನೆ, ಕರ್ತವ್ಯನಿಷ್ಠೆ, ಜನಪರ ಕಾಳಜಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಉಜಿರೆಯ ನಾಗರಿಕರಿಂದ ದೊರೆತ ಅಭೂತಪೂರ್ವ ಗೌರವವೇ ಸಾಕ್ಷಿಯಾಗಿದೆ. ಅವರ ಕಾರ್ಯವೈಖರಿ ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಮಾದರಿಯಾಗಿದೆ ಎಂದು ವಿಧಾನಸಭೆಯ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಹೇಳಿದರು.

ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸೆ. 30ರಂದು ನಡೆದ ‘ಪ್ರಕಾಶಾಭಿವಂದನಮ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಜಿರೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ನೊಚ್ಚ ಪ್ರಕಾಶ್ ಶೆಟ್ಟಿಯವರನ್ನು ಉಜಿರೆ ನಾಗರಿಕರ ಪರವಾಗಿ ಅಭಿನಂದಿಸಲು ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ, ಉಜಿರೆ ಹಾಗೂ ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿಯವರ ಸೇವೆ, ಸಾಧನೆ ಹಾಗೂ ವ್ಯಕ್ತಿತ್ವವನ್ನು ದಾಖಲಿಸಿರುವ ‘ಪ್ರಕಾಶ ಪರ್ವ’ ಅಭಿನಂದನ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

 

ಸರಕಾರಿ ಕೆಲಸ ದೊರಕುವುದು ಪೂರ್ವಜನ್ಮದ ಫಲ ಎಂಬ ಭಾವನೆಯೊಂದಿಗೆ ಸರಕಾರಿ ನೌಕರರು ಜನಸೇವೆಯನ್ನು ತಮ್ಮ ಕರ್ತವ್ಯವೆಂದು ಪರಿಗಣಿಸಬೇಕು. ಜನರ ತೆರಿಗೆಯಿಂದ ನಡೆಯುವ ಆಡಳಿತ ವ್ಯವಸ್ಥೆಯಲ್ಲಿ ಜನರ ಸೇವೆ ಮಾಡುವ ಅವಕಾಶವನ್ನು ಸಮರ್ಪಣಾ ಮನೋಭಾವದಿಂದ ಬಳಸಿಕೊಳ್ಳಬೇಕು. ಪ್ರಕಾಶ್ ಶೆಟ್ಟಿಯವರು ಈ ನಿಟ್ಟಿನಲ್ಲಿ ತಮ್ಮ ಸೇವಾವಧಿಯಲ್ಲಿ ಉತ್ತಮ ಮಾದರಿಯನ್ನು ನಿರ್ಮಿಸಿದ್ದಾರೆ ಎಂದು ಡಾ. ವಿಜಯಪ್ರಕಾಶ್ ಹೇಳಿದರು.

 

 

ಸರಕಾರದ ವಿವಿಧ ತಂಡಗಳು ಉಜಿರೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಯಾವುದೇ ವಿಚಾರದ ಬಗ್ಗೆಯೂ ಸಮರ್ಥವಾಗಿ ಉತ್ತರ ನೀಡುವಷ್ಟು ತಮ್ಮ ಕಾರ್ಯವೈಖರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದ ಪ್ರಕಾಶ್ ಶೆಟ್ಟಿಯವರ ಕರ್ತವ್ಯಪ್ರಜ್ಞೆ ಶ್ಲಾಘನೀಯ. ಅವರ ಸೇವೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಗೌರವಗಳು ಲಭಿಸಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಮೆರುಗು

ಉಜಿರೆ ಗ್ರಾಮ ಪಂಚಾಯತಿಯಲ್ಲಿ ಪ್ರಕಾಶ್ ಶೆಟ್ಟಿಯವರ ಸೇವಾವಧಿಯಲ್ಲಿ ಹಲವು ವಿನೂತನ ಅಭಿವೃದ್ಧಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಸರಕಾರ ಡಿಜಿಟಲ್ ಗ್ರಂಥಾಲಯದ ಪರಿಕಲ್ಪನೆಯನ್ನು ಜಾರಿಗೆ ತರುವ ಮುನ್ನವೇ ಅವರು ಡಿಜಿಟಲ್ ಗ್ರಂಥಾಲಯದ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ವಿನೂತನ ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ, ಅಕ್ಕ ಕೆಫೆ, ಅಕ್ಕ ಮಾರ್ಟ್, ಬತ್ತಿಹೋದ ಕೆರೆಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಅಭಿವೃದ್ಧಿ ಚಟುವಟಿಕೆಗಳು ಅವರ ಸೇವಾವಧಿಯಲ್ಲಿ ನಡೆದಿವೆ ಎಂದು ವಿಜಯಪ್ರಕಾಶ್ ವಿವರಿಸಿದರು.

 

 

 

ಈ ಕಾರ್ಯಗಳು ಕೇವಲ ಕಟ್ಟಡ ಅಥವಾ ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗದೆ, ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಿಸುವ ಮತ್ತು ಪಂಚಾಯತ್ ಆಡಳಿತವನ್ನು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ನಡೆದಿವೆ ಎಂಬುದು ಗಮನಾರ್ಹವಾಗಿದೆ ಎಂದರು.

ಅಧಿಕಾರವಲ್ಲ, ಜವಾಬ್ದಾರಿ ಎಂದು ಭಾವಿಸಿ ಕೆಲಸ: ಪ್ರತಾಪಸಿಂಹ ನಾಯಕ್

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಪ್ರತಿಯೊಬ್ಬರೂ ತಮಗೆ ವಹಿಸಲಾದ ಜವಾಬ್ದಾರಿಗೆ ನ್ಯಾಯ ಒದಗಿಸುವುದೇ ನಿಜವಾದ ದೇಶಸೇವೆ ಎಂದು ಹೇಳಿದರು.

ನೊಚ್ಚ ಪ್ರಕಾಶ್ ಶೆಟ್ಟಿಯವರು ಅಧಿಕಾರವನ್ನು ಅಹಂಕಾರದ ಸಂಕೇತವಾಗಿ ಪರಿಗಣಿಸದೆ, ಅದನ್ನು ಜನರ ಸೇವೆ ಮಾಡುವ ಜವಾಬ್ದಾರಿಯಾಗಿ ಸ್ವೀಕರಿಸಿದ್ದಾರೆ. ಎದುರಾದ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ದೀರ್ಘಕಾಲದ ಆಡಳಿತಾತ್ಮಕ ಅನುಭವ ಮುಂದಿನ ದಿನಗಳಲ್ಲಿ ಸಮಾಜದ ಏಳಿಗೆಗೆ ಮತ್ತಷ್ಟು ಉಪಯುಕ್ತವಾಗಬೇಕು ಎಂದು ಆಶಿಸಿದರು.

‘ಸಾಧ್ಯ’ ಎಂಬ ಪದಕ್ಕೆ ನಿದರ್ಶನ: ಕುಮಾರ್ ಹೆಗ್ಡೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕುಮಾರ್ ಹೆಗ್ಡೆ ಅಭಿನಂದನಾ ನುಡಿಗಳನ್ನಾಡಿ, ಉಜಿರೆ ಗ್ರಾಮ ಪಂಚಾಯತಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರಕುವಂತೆ ಮಾಡುವಲ್ಲಿ ಪ್ರಕಾಶ್ ಶೆಟ್ಟಿಯವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದಿರುವುದರಿಂದ ಗ್ರಾಮದ ಸಮಸ್ಯೆಗಳನ್ನು ಅರಿತು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗಿದೆ. ಧೈರ್ಯ, ಸಾಹಸೀ ಮನೋಭಾವ, ಸೃಜನಶೀಲತೆ, ವಿಭಿನ್ನತೆ ಹಾಗೂ ವಿಶಿಷ್ಟ ಚಿಂತನೆ ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿವೆ. ಉತ್ತಮ ಸಂವಹನ ಸಾಮರ್ಥ್ಯ ಹೊಂದಿರುವ ಅವರು ಪರಿಣಾಮಕಾರಿ ಭಾಷಣಕಾರರೂ ಆಗಿದ್ದಾರೆ ಎಂದು ಹೇಳಿದರು.

ಪ್ರಕಾಶ್ ಶೆಟ್ಟಿಯವರ ಮುಂದಿನ ನಿವೃತ್ತಿ ಜೀವನ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಉಜಿರೆಯ ಸಮಸ್ತ ನಾಗರಿಕರ ಪರವಾಗಿ ಶುಭ ಹಾರೈಸಿದರು.

ಪುರಸ್ಕಾರಕ್ಕಾಗಿ ಅಲ್ಲ, ಪ್ರಜಾಸೇವೆಗಾಗಿ ದುಡಿದವರು’

ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಪ್ರಕಾಶ್ ಶೆಟ್ಟಿಯವರ ಸಾಧನೆಯ ಹಿಂದಿರುವ ಹಲವು ಸವಾಲುಗಳನ್ನು ತಾವು ಕಂಡಿದ್ದೇವೆ. ಅವರ ಸೇವಾವಧಿಯಲ್ಲಿ ಉಜಿರೆ ಗ್ರಾಮವು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

‘ಪ್ರಕಾಶಾಭಿವಂದನಮ್’ ಕಾರ್ಯಕ್ರಮಕ್ಕೆ ನೆರೆದಿರುವ ಜನಸ್ತೋಮವೇ ಅವರಿಗೆ ದೊರೆತಿರುವ ಎಲ್ಲ ಪ್ರಶಸ್ತಿಗಳಿಗಿಂತಲೂ ಮಿಗಿಲಾದ ಗೌರವ. ಅವರು ಯಾವುದೇ ಪುರಸ್ಕಾರವನ್ನು ಪಡೆಯುವ ಉದ್ದೇಶದಿಂದ ಕೆಲಸ ಮಾಡಿದವರಲ್ಲ. ಬದಲಾಗಿ ಪ್ರಜಾಸೇವೆ ಮಾಡುವ ಉದ್ದೇಶದಿಂದ ತಮ್ಮ ಕರ್ತವ್ಯ ನಿರ್ವಹಿಸಿದವರು. ಉಜಿರೆ ಬ್ರಹ್ಮಕಲಶದ ಸಂದರ್ಭದಲ್ಲಿ ಅವರು ನೀಡಿದ ಮಾರ್ಗದರ್ಶನವೂ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.

ನನ್ನ ಜೀವನ ಸಾರ್ಥಕವಾಗಿದೆ’: ಪ್ರಕಾಶ್ ಶೆಟ್ಟಿ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೊಚ್ಚ ಪ್ರಕಾಶ್ ಶೆಟ್ಟಿ, ತಮ್ಮ ಹೆತ್ತವರ ಕನಸಿನಂತೆ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ನಿಂತಿರುವುದರಿಂದ ತಮ್ಮ ಜೀವನ ಸಾರ್ಥಕವಾಗಿದೆ ಎಂದು ಭಾವುಕರಾಗಿ ಹೇಳಿದರು.

 

 

 

ಮಿತ್ತಮಾರು ಬಿರ್ಮಣ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಬೆಳೆದಿರುವುದನ್ನು ಸ್ಮರಿಸಿದ ಅವರು, ಅವರನ್ನು ನೆನಪಿಸಿಕೊಂಡೇ ನಿವೃತ್ತಿಯಾಗುತ್ತಿರುವುದಾಗಿ ಹೇಳಿದರು. ದಿವಂಗತ ವಸಂತ ಬಂಗೇರ ಸೇರಿದಂತೆ ಹಲವು ಹಿರಿಯರ ಪ್ರೋತ್ಸಾಹದಿಂದ ತಮ್ಮ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಯಿತು. ತಮ್ಮ ಜೀವನದ ಬೆಳವಣಿಗೆಯಲ್ಲಿ ಧರ್ಮಪತ್ನಿ ಪ್ರವೀಣಾ ಅವರ ಪಾತ್ರವೂ ಮಹತ್ವದ್ದಾಗಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಸಾಮಾನ್ಯ ವ್ಯಕ್ತಿಗೂ ಜನರ ಸೇವೆ ಮಾಡಲು ಗ್ರಾಮ ಪಂಚಾಯತ್ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಮಾಜಿ ಅಧ್ಯಕ್ಷರಾದ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಉಷಾಕಿರಣ್ ಕಾರಂತ್ ಅವರ ಅವಧಿಯಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಚಟುವಟಿಕೆಗಳಿಂದ ಉಜಿರೆ ಮಾದರಿ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಉಜಿರೆಯಲ್ಲಿ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಮುಂದಿನ ದಿನಗಳಲ್ಲಿಯೂ ತಮ್ಮನ್ನು ಸಾಧ್ಯವಾದಷ್ಟು ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್., ಉಜಿರೆ ವರ್ತಕರ ಸಂಘದ ಅಧ್ಯಕ್ಷ ಬಿ.ಎಸ್. ಪ್ರಸಾದ್, ಉಜಿರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮಹಾವೀರ್ ಶೇಬಣ್ಣ ಉಪಸ್ಥಿತರಿದ್ದರು.

20ಕ್ಕೂ ಅಧಿಕ ಸಂಘ-ಸಂಸ್ಥೆಗಳಿಂದ ಗೌರವ

ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ, ಉಜಿರೆ ಮತ್ತು ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಪ್ರಕಾಶ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪ್ರವೀಣಾ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಇದಾದ ಬಳಿಕ ಉಜಿರೆಯ ವಿವಿಧ ಕ್ಷೇತ್ರಗಳ 20ಕ್ಕೂ ಅಧಿಕ ಸಂಘ-ಸಂಸ್ಥೆಗಳು ದಂಪತಿಯನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪ್ರಕಾಶ್ ಶೆಟ್ಟಿಯವರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಉಜಿರೆಯ ಸಂಚಾಲಕರು ಹಾಗೂ ಪದಾಧಿಕಾರಿಗಳು, ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ವಿನುತಾ ರಜತ್ ಗೌಡ, ಪ್ರಾಧ್ಯಾಪಕ ಮಹೇಶ್ ಕುಮಾರ್ ಶೆಟ್ಟಿ, ಅನಂತ್ ಮಚ್ಚಿಮಲೆ, ಎಸ್.ಡಿ.ಎಂ. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಕಾಶ್ ಶೆಟ್ಟಿಯವರ ಕುಟುಂಬಸ್ಥರು, ಊರಿನ ನಾಗರಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸೋಮಶೇಖರ್ ಶೆಟ್ಟಿ ಮತ್ತು ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಡಾ. ಭಾಷಿಣಿ ಪ್ರಾರ್ಥಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ್ ಶೆಟ್ಟಿ ಸಾಧನ ಪ್ರಸ್ತಾವಿಸಿ ಸ್ವಾಗತಿಸಿದರು. ಸಂಚಾಲಕ ಕೆ. ಮೋಹನ್ ಕುಮಾರ್ ಗಣ್ಯರಿಗೆ ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಿದರು.

ಪ್ರಕಾಶ್ ಶೆಟ್ಟಿಯವರ ನಿವೃತ್ತಿ ಸಂದರ್ಭದಲ್ಲಿ ನಡೆದ ‘ಪ್ರಕಾಶಾಭಿವಂದನಮ್’ ಕಾರ್ಯಕ್ರಮವು ಅವರ ದೀರ್ಘಕಾಲದ ಸೇವೆ, ಜನಸಂಪರ್ಕ ಹಾಗೂ ಉಜಿರೆಯ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಸ್ಮರಿಸುವ ವಿಶೇಷ ಸಂದರ್ಭವಾಗಿ ಮೂಡಿಬಂತು.

error: Content is protected !!