ಸೌಜನ್ಯ ಪ್ರಕರಣ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ:ಆ10 ಬೆಳ್ತಂಗಡಿಗೆ  ನ್ಯಾಯದ ನಡಿಗೆ ಮಹೇಶ್ ಶೆಟ್ಟಿ ತಿಮರೋಡಿ:

 

 

ಬೆಳ್ತಂಗಡಿ:  ಸೌಜನ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಸೌಜನ್ಯ ಹೋರಾಟ ಸಮಿತಿಯ ವತಿಯಿಂದ ‘ನ್ಯಾಯದ ನಡಿಗೆ’ ಹಾಗೂ ಅಭಿನಂದನಾ ಸಭೆಯು  ನಡೆಯಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದರು.ಅವರು ತಿಮರೋಡಿಯಲ್ಲಿ  ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

2012ರ ಅಕ್ಟೋಬರ್ 10ರಂದು ನಡೆದ ಸೌಜನ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಕುಸುಮಾವತಿ ಸಲ್ಲಿಸಿದ್ದ  ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2026ರ ಸೆಪ್ಟೆಂಬರ್ 22ರಂದು ಪ್ರಕರಣದ ಮರುತನಿಖೆಗಾಗಿ ಹೊಸ ವಿಶೇಷ ತನಿಖಾ ತಂಡ (SIT) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ

ಸೌಜನ್ಯ ಪ್ರಕರಣದ ತನಿಖೆಯನ್ನು ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸರು ಹಾಗೂ ನಂತರ ಸಿಬಿಐ ನಡೆಸಿದ್ದರೂ, ನ್ಯಾಯ ದೊರೆತಿಲ್ಲ . ಇದೀಗ ಸುಪ್ರೀಂ ಕೋರ್ಟ್‌ನ ಮರುತನಿಖೆ ಆದೇಶವು ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಕ್ಕೆ ಹೊಸ ಆಶಾಭಾವನೆ ಮೂಡಿಸಿದೆ .

ಸುಪ್ರೀಂ ಕೋರ್ಟ್ ಹಿಂದಿನ ತನಿಖೆಯ ಕುರಿತು ಪ್ರಶ್ನೆಗಳನ್ನು ಎತ್ತಿರುವುದು ತನಿಖೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ . ಹೊಸ SIT ಯಾವುದೇ ಪ್ರಭಾವ, ಒತ್ತಡ ಅಥವಾ ಪೂರ್ವಗ್ರಹಕ್ಕೆ ಒಳಗಾಗದೆ ತನಿಖೆ ನಡೆಸಿ ನಿಜಾಂಶವನ್ನು ಹೊರತಂದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸೌಜನ್ಯಳ 14ನೇ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಮರುತನಿಖೆ ಆದೇಶವನ್ನು ಸ್ವಾಗತಿಸಿ, ಹೋರಾಟಕ್ಕೆ ಬೆಂಬಲ ನೀಡಿದ ನ್ಯಾಯವಾದಿಗಳು, ಸಾಮಾಜಿಕ ಜಾಲತಾಣ ಕಾರ್ಯಕರ್ತರು, ಯೂಟ್ಯೂಬ್ ಹಾಗೂ ಇತರ ಮಾಧ್ಯಮಗಳು, ಪತ್ರಕರ್ತರು ಮತ್ತು ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ನ್ಯಾಯದ ನಡಿಗೆಯನ್ನು ಉಜಿರೆ ಕುಂಜರ್ಪದಿಂದ ಬೆಳ್ತಂಗಡಿ ನಗರಕ್ಕೆ ಹಮ್ಮಿಕೊಳ್ಳಲಾಗಿದ್ದು  ಅಲ್ಲಿ  ಅಭಿನಂದನಾ ಸಭೆ ಆಯೋಜಿಸಲಾಗಿದೆ ಎಂದು  ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಮಟ್ಟಣ್ಣನವರ್, ಸೌಜನ್ಯ ತಾಯಿ ಕುಸುಮಾವತಿ,ಅನಿಲ್ ಅಂತರ, ಉಪಸ್ಥಿತರಿದ್ದರು

ಹೋರಾಟಗಾರರ ಪ್ರಮುಖ ಆಗ್ರಹಗಳು

* ಹೊಸ SIT ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ನಡೆಸಬೇಕು. ಸಾಕ್ಷಿಗಳು ಮತ್ತು ಮಾಹಿತಿದಾರರಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಆಮಿಷ ಒಡ್ಡದಂತೆ ಕ್ರಮ ಕೈಗೊಳ್ಳಬೇಕು.
* ತನಿಖೆಯನ್ನು ದಾರಿತಪ್ಪಿಸಲು ಅಥವಾ ಸಾಕ್ಷ್ಯಗಳನ್ನು ಪ್ರಭಾವಿಸಲು ಸಂಚು ರೂಪಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
* ಸೌಜನ್ಯ ಹೋರಾಟಗಾರರು, ನ್ಯಾಯವಾದಿಗಳು, ಸಾಕ್ಷಿಗಳು ಮತ್ತು ಮಾಹಿತಿದಾರರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನಡೆಯುವ ‘ಮಾಧ್ಯಮ ವಿಚಾರಣೆ’ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
* ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಚಿಸಲಾಗಿದ್ದ SIT ವರದಿಯ ಹಿನ್ನೆಲೆಯಲ್ಲಿ ಮುಂದಿನ ತನಿಖೆ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು. ವರದಿಯನ್ನು ಸಾರ್ವಜನಿಕಗೊಳಿಸುವುದು ಮತ್ತು ತನಿಖೆಯ ಮುಂದಿನ ಹಂತಗಳ ಕುರಿತು ಪಾರದರ್ಶಕತೆ ಕಾಪಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
* ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರ ವಿಶೇಷ ‘ಸೌಜನ್ಯ ಸಹಾಯವಾಣಿ’ ಆರಂಭಿಸಿ, ತುರ್ತು ನೆರವು ಮತ್ತು ದೂರು ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

“ಹೊಸ SIT ತನಿಖೆ ನ್ಯಾಯಸಮ್ಮತವಾಗಿ ನಡೆದು ನಿಜವಾದ ಅಪರಾಧಿಗಳು ಪತ್ತೆಯಾಗಬೇಕು. ಈ ಮೂಲಕ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರೆಯುವುದರ ಜೊತೆಗೆ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಮತ್ತಷ್ಟು ಬಲಪಡಬೇಕು” ಎಂದು ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಕುಸುಮಾವತಿ ಹಾಗೂ ಗಿರೀಶ ಮಟ್ಟೆಣ್ಣವರ ತಿಳಿಸಿದ್ದಾರೆ.

ನ್ಯಾಯದ ನಡಿಗೆ ಹಾಗೂ ಅಭಿನಂದನಾ ಸಭೆಯ ಯಶಸ್ಸಿಗೆ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ  ಮನವಿ ಮಾಡಿದ್ದಾರೆ.

error: Content is protected !!