
ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಗಳು ನಡೆದವು. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಪೂರ್ಣಗೊಂಡಿರುವ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.
ಕೊಕ್ಕಡದಲ್ಲಿ 83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎಂಡೋಸಲ್ಫಾನ್ ಸಂತ್ರಸ್ತರ ನೂತನ ಪಾಲನಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಗತ್ಯ ಆರೈಕೆ, ಪಾಲನೆ ಹಾಗೂ ಸಾಮಾಜಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರ ಮಹತ್ವದ ಹೆಜ್ಜೆಯಾಗಿದೆ.
ಇದೇ ವೇಳೆ ಶಿಶಿಲದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಹಾಗೂ ನೆರಿಯದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಆಶ್ರಮ ಶಾಲೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಚಾರ್ಮಾಡಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮಕ್ಕಳಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣದಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕ ಆರೈಕೆ ಒದಗಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.
ಇದಲ್ಲದೆ, ತಾಲೂಕಿನ ಕಳೆಂಜ, ಕನ್ಯಾಡಿ, ಧರ್ಮಸ್ಥಳ, ಮಿತ್ತಬಾಗಿಲು, ಇಂದಬೆಟ್ಟು, ನಡ, ಕಾಶಿಬೆಟ್ಟು, ಮಲೆಬೆಟ್ಟು, ಕೊಯ್ಯೂರು, ಇಳಂತಿಲ, ಕಲ್ಲೇರಿ ಹಾಗೂ ನ್ಯಾಯತರ್ಪು ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಕೇಂದ್ರಗಳು ನಿರ್ಮಾಣವಾಗಲಿವೆ.
ಪೆರ್ಲಬೈಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶೌಚಾಲಯ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಲಾಯಿತು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಮಾಜದ ಬೆಂಬಲ ಅಗತ್ಯ:ಬ್ರಿಜೇಶ್ ಚೌಟ
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಎಂಡೋಸಲ್ಫಾನ್ ಸಮಸ್ಯೆ ಬೆಳ್ತಂಗಡಿ ತಾಲೂಕಿಗೆ ಶಾಪದ ರೀತಿಯಲ್ಲಿ ಕಾಡಿದೆ. ಸಂತ್ರಸ್ತರ ನೋವು ಮತ್ತು ಸಂಕಷ್ಟಕ್ಕೆ ಸಮಾಜ ಸ್ಪಂದಿಸುವ ಅಗತ್ಯವಿದೆ ಎಂದು ಹೇಳಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿರುವ ಪಾಲನಾ ಕೇಂದ್ರವನ್ನು ಸ್ಥಳೀಯರು ತಮ್ಮದೇ ಕೇಂದ್ರವೆಂದು ಭಾವಿಸಿ, ಅದರ ಅಭಿವೃದ್ಧಿ ಹಾಗೂ ಉತ್ತಮ ನಿರ್ವಹಣೆಗೆ ಸಹಕಾರ ನೀಡಬೇಕು. ಈ ಕೇಂದ್ರವನ್ನು ರಾಜ್ಯದಲ್ಲೇ ಮಾದರಿ ಹಾಗೂ ಆದರ್ಶ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವರ ಅಬ್ಯುದಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಚೌಟ ತಿಳಿಸಿದರು. ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ಕೊರಗ ಸಮುದಾಯದವರು ವಾಸಿಸುತ್ತಿರುವ ಪ್ರದೇಶಗಳನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆಶ್ರಮ ಶಾಲೆಗಳ ಅಭಿವೃದ್ಧಿಯಿಂದ ಮಕ್ಕಳಿಗೆ ಅನುಕೂಲ:ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ ಮಾತನಾಡಿ, ವಾಲ್ಮೀಕಿ ಆಶ್ರಮ ಶಾಲೆಗಳ ಅಭಿವೃದ್ಧಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಲು ಅನುಕೂಲವಾಗಲಿದೆ ಎಂದರು.
ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಸಮರ್ಪಕ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಶಿಶಿಲ ಮತ್ತು ನೆರಿಯದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಇಂತಹ ಮೂಲಸೌಕರ್ಯಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮನವಿ
ವಿವಿಧ ಕಾರ್ಯಕ್ರಮಗಳ ಸಂದರ್ಭ ಗ್ರಾಮಸ್ಥರು ತಮ್ಮ ಪ್ರದೇಶಗಳಲ್ಲಿ ಎದುರಿಸುತ್ತಿರುವ ರಸ್ತೆ, ನೆಟ್‌ವರ್ಕ್ ಸಂಪರ್ಕ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು. ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಅಂಗನವಾಡಿ, ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಒಂದೇ ದಿನದಲ್ಲಿ ಚಾಲನೆ ದೊರೆತಿರುವುದು ಸ್ಥಳೀಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.