
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (SIT) ಇದೀಗ 16 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಹಾಯಕರಾಗಿ ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್‌ನ ಮರುತನಿಖೆ ಆದೇಶದ ಬಳಿಕ ರಾಜ್ಯ ಸರ್ಕಾರ ಸೆಪ್ಟೆಂಬರ್ 24ರಂದು ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಪೊಲೀಸ್ ಮಹಾನಿರೀಕ್ಷಕ ಎನ್. ಶಶಿಕುಮಾರ್, ಐಪಿಎಸ್ ಅವರು SITಯ ಮುಖ್ಯಸ್ಥರಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತವಾರ್ತೆಯ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರು ಸದಸ್ಯರಾಗಿದ್ದಾರೆ.
ಇದೀಗ ತನಿಖೆಗೆ ಸಹಕಾರ ನೀಡಲು ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ ಬಿ., ಸಿಐಡಿ ಇನ್ಸ್‌ಪೆಕ್ಟರ್‌ಗಳಾದ ದೀಪಕ್, ಮೋಹನ್ ಡಿ. ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್, ಕಂಕನಾಡಿ ಠಾಣೆಯ ಮಹಿಳಾ ಪಿಎಸ್ಐ ಅನಿತಾ ನಿಕಂ, ಮಂಗಳೂರು ಸಿಸಿಬಿಯ ಎಎಸ್ಐ ಮೋಹನ್ ಸೇರಿದಂತೆ ಒಟ್ಟು 16 ಮಂದಿಯನ್ನು ನೇಮಕ ಮಾಡಲಾಗಿದೆ.
ಕಂಕನಾಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್ ಎನ್., ಉಳ್ಳಾಲ ಠಾಣೆಯ ರಾಧಾಕೃಷ್ಣ ಕೆ.ಕೆ., ಕಾವೂರು ಠಾಣೆಯ ರೆಜಿ ವಿ.ಎಂ., ಸುರತ್ಕಲ್ ಠಾಣೆಯ ರಾಜೇಂದ್ರ ಪ್ರಸಾದ್ ವಿ.ಪಿ. ಹಾಗೂ ಕಂಕನಾಡಿ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರು ಕೂಡ ತನಿಖಾ ಸಹಾಯಕರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನೇಮಕಗೊಂಡಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗಳಿಂದ ತಕ್ಷಣವೇ ಬಿಡುಗಡೆಗೊಂಡು ಬೆಂಗಳೂರಿನಲ್ಲಿರುವ SIT ತನಿಖಾ ತಂಡದ ಮುಂದೆ ವರದಿ ಮಾಡಿಕೊಳ್ಳುವಂತೆ ಡಿಜಿ&ಐಜಿಪಿ ಡಾ. ಎಂ.ಎ. ಸಲೀಂ ಅವರು ಸೆಪ್ಟೆಂಬರ್ 29ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.
ಇದರೊಂದಿಗೆ ಸೌಜನ್ಯ ಪ್ರಕರಣದ ಮರುತನಿಖೆಗೆ ರಚಿಸಲಾದ SIT ತನ್ನ ತನಿಖಾ ಕಾರ್ಯವನ್ನು ಕೈಗೊಳ್ಳಲು ಅಗತ್ಯ ಸಿಬ್ಬಂದಿ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.