
ಬೆಳ್ತಂಗಡಿ: ಬೆಳಗಿನ ನಿಶ್ಶಬ್ದತೆಯನ್ನು ಭಜನೆಯ ಮಧುರ ನಾದ ಆವರಿಸಿದಾಗ ಮನಸ್ಸಿಗೆ ನೆಮ್ಮದಿ. ಸಂಜೆ ದೇವರ ನಾಮಸ್ಮರಣೆಯೊಂದಿಗೆ ದಿನ ಮುಗಿದಾಗ ಬದುಕಿಗೊಂದು ಸಾರ್ಥಕತೆಯ ಭಾವ. ಇಂತಹ ಭಜನಾ ಸಂಸ್ಕೃತಿಯನ್ನು ಮನೆ-ಮನಗಳಿಗೆ ತಲುಪಿಸುವ ಉದ್ದೇಶದೊಂದಿಗೆ ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟಕ್ಕೆ ಸೋಮವಾರ ಚಾಲನೆ ದೊರೆಯಿತು.
ಮಹೋತ್ಸವ ಸಭಾಭವನದಲ್ಲಿ ನಡೆದ ಕಮ್ಮಟವನ್ನು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
“ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದು ಬದುಕನ್ನು ಪಾವನಗೊಳಿಸುತ್ತದೆ” ಎಂಬ ಸಂದೇಶವನ್ನು ಸ್ವಾಮೀಜಿ ನೀಡಿದರು. ಕಲಿಯುಗದಲ್ಲಿ ಕಠಿಣ ತಪಸ್ಸು ಕೈಗೊಳ್ಳುವುದು ಕಷ್ಟವಾದರೂ, ದೇವರು ನೀಡಿರುವ ತನು, ಮನ, ನಾಲಗೆ ಮತ್ತು ವಿವೇಕವನ್ನು ಸತ್ಕಾರ್ಯಕ್ಕೆ ಬಳಸಿಕೊಂಡು ಭಜನೆ ಮಾಡುವ ಮೂಲಕ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಬಹುದು ಎಂದರು.
ಭಜನೆ ಕೇವಲ ದೇವರ ನಾಮಸ್ಮರಣೆಗೆ ಸೀಮಿತವಾಗದೆ, ಉತ್ತಮ ಸಂಸ್ಕಾರ ಮತ್ತು ಧರ್ಮಜಾಗೃತಿಯ ಮಾಧ್ಯಮವಾಗಬೇಕು ಎಂಬ ಆಶಯವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಧರ್ಮಸ್ಥಳದ ಚತುರ್ಧಾನ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಭಜನಾ ಸಂಸ್ಕೃತಿಯನ್ನು ಮನೆ-ಮನಗಳಿಗೆ ತಲುಪಿಸುವ ಕಾರ್ಯಕ್ಕಾಗಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಯ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿದರು.
“ಭಜಕರು ಊರಿನ ಪ್ರಗತಿಯ ರೂವಾರಿಗಳಾಗಲಿ”
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಭಜನಾ ಕಮ್ಮಟದ ಮತ್ತೊಂದು ಮಹತ್ವದ ಮುಖವನ್ನು ತೆರೆದಿಟ್ಟರು.
“ಭಜನಾ ತರಬೇತಿ ಪಡೆದು ಹಿಂದಿರುಗುವವರು ತಮ್ಮ ತಮ್ಮ ಊರಿನ ಪ್ರಗತಿಯ ರೂವಾರಿಗಳಾಗಬೇಕು. ಆದರ್ಶ ನಾಯಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೂ ಭಜನಾ ಸಂಸ್ಕೃತಿಯನ್ನು ಪರಿಚಯಿಸಬೇಕು” ಎಂದು ಅವರು ಕರೆ ನೀಡಿದರು.
ಹೀಗೆ ಭಜನೆಯ ಮೂಲಕ ವ್ಯಕ್ತಿಯ ಅಂತರಂಗದ ಪರಿವರ್ತನೆಯಿಂದ ಆರಂಭವಾಗಿ, ಕುಟುಂಬ, ಊರು ಮತ್ತು ಸಮಾಜದ ಸುಧಾರಣೆಯತ್ತ ಸಾಗುವ ಚಿಂತನೆಗೆ ಕಮ್ಮಟ ವೇದಿಕೆಯಾಯಿತು.
ಮಾಣಿಲದ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.
ವಿದುಷಿ ಚೈತ್ರಾ ಭಟ್ ಧರ್ಮಸ್ಥಳ ಹಾಗೂ ಬಳಗದವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ವಂದಿಸಿದರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶಶಿಕಾಂತ ಜೈನ್ ಅವರ ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
123 ಭಜನಾ ಮಂಡಳಿಗಳ 204 ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದು, ಭಜನೆಯ ಮೂಲಕ ಭಕ್ತಿ, ಸಂಸ್ಕಾರ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸುವ ಪಯಣ ಮುಂದುವರಿದಿದೆ.