
ಬಂಟ್ವಾಳ: ಧರ್ಮಸ್ಥಳ ಗ್ರಾಮದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದಲ್ಲಿ ಗೊಂದಲವಿದ್ದು, ತಂಡದಲ್ಲಿರುವ ಎಲ್ಲ ಅಧಿಕಾರಿಗಳ ಸಾಮರ್ಥ್ಯದ ಬಗ್ಗೆ ಸಂಶಯವಿದೆ ಎಂದು ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಅವರು ಬಂಟ್ವಾಳದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಪ್ರಕರಣದ ಮರುತನಿಖೆಗಾಗಿ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ. ಆದರೆ, ತಂಡದಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿದ್ದಾರೆ ಎಂಬ ವಿಶ್ವಾಸವಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಕರಣದಲ್ಲಿ ಅಧಿಕಾರಿಗಳು ಯಾವುದೇ ಒತ್ತಡ ಅಥವಾ ಪೂರ್ವಾಗ್ರಹಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಕಳೆದ 14 ವರ್ಷಗಳಿಂದ ಬಾಲಕಿಯ ಆತ್ಮ ನ್ಯಾಯಕ್ಕಾಗಿ ಹೋರಾಡುತ್ತಿರುವಂತಾಗಿದೆ. ಇಂತಹ ಪರಿಸ್ಥಿತಿ ಬೇರೆ ಯಾವುದೇ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಎಸ್‌ಐಟಿ ತಂಡವು ಸತ್ಯವನ್ನು ಪತ್ತೆಹಚ್ಚಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಅಧಿಕಾರಿಗಳು ಯಾವುದೇ ಕಡೆ ನೋಡದೆ, ಪ್ರಕರಣದ ನೈಜ ಸಂಗತಿಗಳನ್ನು ಹುಡುಕಬೇಕು. ಪ್ರಾಮಾಣಿಕ ತನಿಖೆ ನಡೆದರೆ ಸತ್ಯ ಶೇ.100ರಷ್ಟು ಹೊರಬರಲಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅಪರಾಧಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಪೊಲೀಸರಿಗೆ ಇದೆ. ಮಂಗಳೂರು ಕಮಿಷನರ್‌ನಂತಹ ಬಲಿಷ್ಠ ಹಾಗೂ ಅನುಭವಿ ಇನ್ನಷ್ಟು ಅಧಿಕಾರಿಗಳನ್ನು ಎಸ್‌ಐಟಿ ತಂಡದಲ್ಲಿ ಸೇರಿಸಬೇಕಿತ್ತು ಎಂಬ ಅಭಿಪ್ರಾಯವನ್ನೂ ಈ ವೇಳೆ ಅವರು ವ್ಯಕ್ತಪಡಿಸಿದರು.